ಶಿವಳ್ಳಿ ಬ್ರಾಹ್ಮಣ ರಾಜ್ಯ ಸಮ್ಮೇಳನ ಮುಕ್ತಾಯ
0
ಫೆಬ್ರವರಿ 08, 2019
ಬದಿಯಡ್ಕ: ಉಡುಪಿ ಮಾಧ್ವ ಬ್ರಾಹ್ಮಣ (ಶಿವಳ್ಳಿ) ಸಭಾದ 41ನೇ ಕೇರಳ ರಾಜ್ಯ ಮಟ್ಟದ ದ್ವಿದಿನ ಸಮ್ಮೇಳನವು ತೃಶೂರಿನ ಸರಸ್ವತಿ ವಿದ್ಯಾಮಂದಿರದ ಪರಿಸರದಲ್ಲಿ ಇತ್ತೀಚೆಗೆ ನಡೆಯಿತು. ಉಡುಪಿ ಮಾಧ್ವ ಬ್ರಾಹ್ಮಣ ಸಭಾದ ಅಧ್ಯಕ್ಷ ಗಿರಿರಾಜನ್ ಧ್ವಜಾರೋಹಣ ಮಾಡಿ ಸಮ್ಮೇಳನಕ್ಕೆ ಚಾಲನೆ ನೀಡಿದರು. ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಸುಮಾರು 60 ಮಂದಿ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಸರಗೋಡು ಶಿವಳ್ಳಿ ಬ್ರಾಹ್ಮಣ ಸಭಾದ ಪ್ರಧಾನ ಕಾರ್ಯದರ್ಶಿ ನೇರಪ್ಪಾಡಿ ಅರವಿಂದ ಕುಮಾರ್ ಅಲೆವೂರಾಯ ಅವರಿಗೆ ಯುಎಂಬಿಎಸ್ ಕೇರಳ ರಾಜ್ಯ ಘಟಕದ ವತಿಯಿಂದ ಅತ್ಯುತ್ತಮ ಘಟಕ ಕಾರ್ಯದರ್ಶಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮ್ಮೇಳನದಲ್ಲಿ ನಡೆದ ಸಮುದಾಯದ ವ್ಯಾಪ್ತಿಯ ಕೇರಳ ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಸತ್ಯನಾರಾಯಣ ತಂತ್ರಿ, ಆಕಾಶ್ ಕೇಶವ್, ಕೀರ್ತಿ ಸೀತಾರಾಮ ಕಡಮಣ್ಣಾಯ ಬಂಬ್ರಾಣ, ಸುನೀತಾ ಬೈಪಡಿತ್ತಾಯ, ಆದ್ಯಂತ್ ಅಡೂರು ಮೊದಲಾದವರು ವೈಯಕ್ತಿಕ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದರು. ಕಾಸರಗೋಡಿನ ಪದ್ಮಪ್ರಿಯ ಮಹಿಳಾ ಭಜನಾ ಮಂಡಳಿಯು ಮಹಿಳಾ ಭಜನಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದೆ. ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಘಟಕವು ರಂಗೋಲಿ ಸ್ಪರ್ಧೆಯಲ್ಲಿ ತೃತೀಯ, ಶ್ರೀಸೂಕ್ತ ಪಾರಾಯಣದಲ್ಲಿ ಪ್ರಥಮ, ದೇಶಭಕ್ತಿ ಗೀತೆಯಲ್ಲಿ ಪ್ರಥಮ ಸ್ಥಾನ ಪಡೆಯಿತು. ಸಮ್ಮೇಳನದಲ್ಲಿ ಬದಿಯಡ್ಕ ಸಮೀಪದ ನೇರಪ್ಪಾಡಿಯ ಕೇಶವ ಮುರಳಿ ಅವರಿಗೆ ಈ ವರ್ಷದ ಯುವಶಕ್ತಿ ಪ್ರಶಸ್ತಿ ಹಾಗೂ ಬಂಬ್ರಾಣದ ಕರ್ಕುಳಬೂಡು ಶಂಕರನಾರಾಯಣ ಕಡಮಣ್ಣಾಯರಿಗೆ ಧರ್ಮೋತ್ತಮ ಪ್ರಶಸ್ತಿಯನ್ನು ವಿತರಿಸಲಾಯಿತು.ಸಮ್ಮೇಳನದಲ್ಲಿ ತಿರುವನಂತಪುರ ಘಟಕವು ಪ್ರಥಮ, ಕಾಸರಗೋಡು ಜಿಲ್ಲಾ ಘಟಕವು ದ್ವಿತೀಯ ಸ್ಥಾನ ಹಾಗೂ ತೃಶೂರು ಜಿಲ್ಲಾ ಘಟಕವು ತೃತೀಯ ಸ್ಥಾನ ಪಡೆಯಿತು. ಸಮ್ಮೇಳನದಲ್ಲಿ ಕೇರಳದಾದ್ಯಂತ ಇರುವ ಮಾಧ್ವ ಬ್ರಾಹ್ಮಣ ಸಭಾದ ಸುಮಾರು 12 ಜಿಲ್ಲಾ ಘಟಕಗಳು ಭಾಗವಹಿಸಿದ್ದುವು. ಕಾರ್ಯಕ್ರಮದಲ್ಲಿ ಸಮುದಾಯದ ಸದಸ್ಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದುವು.