ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರನೇ ಪೊಲೀಸ್ ಠಾಣೆ ಸಜ್ಜು: ಸಾರ್ವಜನಿಕರ ಸಮಸ್ಯೆ ಬಗೆಹರಿಕೆಗೆ ಸಿದ್ಧವಾದ ಮೇಲ್ಪರಂಬ ಪೊಲೀಸ್ ಠಾಣೆ
0
ಫೆಬ್ರವರಿ 08, 2019
ಕಾಸರಗೋಡು: ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚೆಮ್ನಾಡ್ ಗ್ರಾಮಪಂಚಾಯತ್ ನ ಮೇಲ್ಪರಂಬದಲ್ಲಿ ನೂತನ ಪೊಲೀಸ್ ಠಾಣೆ ಆರಂಭಗೊಳ್ಳಲಿದೆ.
ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ನಿಟ್ಟಿನಲ್ಲಿ ನಡೆಯುವ ಜನಪರ ಉತ್ಸವಗಳ ಅಂಗವಾಗಿ ಈ ಠಾಣೆಯ ಚಾಲನೆ ನಡೆಯಲಿದೆ. ಈ ಮೂಲಕ ಜಿಲ್ಲೆಯಲ್ಲಿ ಮೂರನೇ ಹೈವೇ ಪೊಲೀಸ್ ಠಾಣೆ ಶುಭಾರಂಭ ಕಾಣುತ್ತಿದೆ.
ಕಾಸರಗೋಡು ಠಾಣೆ ಮತ್ತು ನೀಲೇಶ್ವರ ಠಾಣೆಗಳ ನಡುವಿನ ಪ್ರದೇಶಗಳಾದ ಕಳನಾಡ್, ಚೆಮ್ನಾಡ್, ತೆಕ್ಕಿಲ್, ಬಾರ, ಪೆರುಂಬಳ ಪ್ರದೇಶಗಳು ಮೇಲ್ಪರಂಬ ಠಾಣೆಯ ವ್ಯಾಪ್ತಿಯಲ್ಲಿ ಬರಲಿವೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾತ್ರಿಕರಿಗೆ ಪ್ರಯಾಣ ಮಧ್ಯೆ ಯಾವುದಾದರೂ ಸಮಸ್ಯೆ ತಲೆದೋರಿದಲ್ಲಿ ಕಾಸರಗೋಡು ಯಾ ನೀಲೇಶ್ವರ ಠಾಣೆಗಳನ್ನು ಸಂಪರ್ಕಿಸಬೇಕಾಗಿ ಬರುತ್ತಿತ್ತು. ಬಹಳ ಅಂತರದ ಹಿನ್ನೆಲೆಯಲ್ಲಿ ಇದು ಬಹುತೇಕ ಬಾರಿ ಸಮಸ್ಯೆಯಾಗುತ್ತಿತ್ತು. ಮೇಲ್ಪರಂಬ ಠಾಣೆ ಆರಂಭ ಮೂಲಕ ಈ ಸಮಸ್ಯೆ ಬಗೆಹರಿಯಲಿದೆ.
ಇಲ್ಲಿ 36 ಮಂದಿ ಪೊಲೀಸರು ಕರ್ತವ್ಯದಲ್ಲಿರುವರು. ಒಬ್ಬ ಸರ್ಕಲ್ ಇನ್ಸ್ ಪೆಕ್ಟರ್, ಇಬ್ಬರು ಸಬ್ ಇನ್ಸ್ ಪೆಕ್ಟರ್ ಗಳು, ಒಬ್ಬ ಸಹಾಯಕ ಸಬ್ ಇನ್ಸ್ ಪೆಕ್ಟರ್, 5 ಮಂದಿ ಹಿರಿಯ ನಾಗರೀಕ ಪೊಲೀಸರು, , 20 ಮಂದಿ ನಾಗರೀಕ ಪೊಲೀಸರು, 5 ಮಂದಿಮಹಿಳಾ ಪೊಲೀಸರು, ಇಬ್ಬರು ವಾಹನಚಾಲಕರು ಕರ್ತವ್ಯ ನಿರ್ವಹಿಸುವರು.
ಎರಡು ಅಂತಸ್ತಿನ ಕಟ್ಟಡದಲ್ಲಿ ಈ ಪೊಲೀಸ್ ಠಾಣೆ ಚಟುವಟಿಕೆ ನಡೆಸಲಿದೆ. ಈ ಮೂಲಕ ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆಗಳ ಬಗೆಹರಿಕೆ ಸಾಧ್ಯ ಎಂದು ಅಧಿಕಾರಿಗಳು ಮತ್ತು ಸಾರ್ವಜನಿಕರು ನಿರೀಕ್ಷಿಸಿದ್ದಾರೆ.
ಫೆ.17ರಂದು ಆರಂಭ
ಫೆ.17ರಂದು ಮೇಲ್ಪರಂಬ ಪೊಲೀಸ್ ಠಾಣೆಯ ಉದ್ಘಾಟನೆ ನಡೆಯಲಿದೆ. ರಾಜ್ಯ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರು ವಿಡಿಯೋ ಕಾನ್ ಫೆರೆನ್ಸ್ ಮೂಲಕ ಠಾಣೆ ಉದ್ಘಾಟಿಸುವರು.