ಜಿಲ್ಲಾ ವಾರ್ತಾಧಿಕಾರಿಗಳ ನೂತನ ಕಾರ್ಯಾಲಯ ಕಟ್ಟಡಕ್ಕೆ ಶಿಲಾನ್ಯಾಸ
0
ಫೆಬ್ರವರಿ 26, 2019
ಕಾಸರಗೋಡು: ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ವೇಳೆ ಎಲ್ಲ ವಲಯಗಳಲ್ಲಿ ಬೃಹತ್ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ರಾಜ್ಯಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಾಗಿ ನಿರ್ಮಿಸಲಾಗುವ ನೂತನ ಕಟ್ಟಡಕ್ಕೆ ಮಂಗಳವಾರ ಶಿಲಾನ್ಯಾಸ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಸಭಾಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸರಕಾರದ ಸಂದೇಶಗಳನ್ನು ಕ್ಲಪ್ತ ಸಮಯದಲ್ಲಿ ಜನತೆಗೆ ತಲಪಿಸುವ ಹೊಣೆಯನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ವಹಿಸುತ್ತಿದೆ. ಜೊತೆಗೆ ಸರಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಚಟುವಟಿಕೆ ನಡೆಸುತ್ತಿರುವುದು ಪ್ರಶಂಸನೀಯ ಎಂದರು.
ಶಿಕ್ಷಣ ಇಲಾಖೆಗೆ ಮಾತ್ರ ಒಂದು ಸಾವಿರ ಕೊಟಿ ರೂ. ಮೀಸಲಿರಿಸಿದೆ. ಯುವಜನತೆಗಾಗಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. 18,896 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಬರಿದಾಗಿರುವಹುದ್ದೆಗಳಿಗೆ ನೇಮಕಾತಿಗೂ ಸರ್ವ ಯತ್ನ ನಡೆಸಿದೆ. ಅಭಿವೃದ್ಧಿಗಾಗಿ ಬಳಸುವ ನಿಧಿಗಳನ್ನು ಸೂಕ್ತ ಅವಧಿಯಲ್ಲಿ ಬಳಸಲಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ಬಹುತೇಕ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದವರು ನಿರೀಕ್ಷೆ ವ್ಯಕ್ತಪಡಿಸಿದರು.
ಕಂದಾಯ ಇಲಾಖೆ ಮಂಜೂರು ಮಾಡಿರುವ ಹತ್ತು ಸೆಂಟ್ಸ್ ಜಾಗದಲ್ಲಿ 1.76 ಕೋಟಿ ರೂ. ವೆಚ್ಚದಲ್ಲಿ ನೂತನಕಟ್ಟಡ ನಿರ್ಮಾಣಗೊಳ್ಳಲಿದೆ.
ಕನ್ನಡ ಭಾಷಾಂತರ ಘಟಕ, ಕೆರಿಯರ್ ಗೈಡೆನ್ಸ್ ಸೆಂಟರ್ ಉದ್ಘಾಟನೆ ಮತ್ತು ಜಿಲ್ಲ ಕ್ರೀಡಾಮಂಡಳಿ ನೇತೃತ್ವದಲ್ಲಿ ಸಿವಿಲ್ ಸ್ಟೇಷನ್ ಆವರಣದಲ್ಲಿ ನಿರ್ಮಿಸುವ ಒಳಾಂಗಣ ಕ್ರೀಡಾಂಗಣದ ಶಿಲಾನ್ಯಾಸ ಅವರು ಈ ವೇಳೆ ನಡೆಸಿದರು.
ಸಂಸದ ಪಿ.ಕರುಣಾಕರನ್ ಅಧ್ಯಕ್ಷತೆ ವಹಿಸಿದ್ದರು. ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಪಿ.ಎಸ್.ರಾಜಶೇಖರನ್ ಯೋಜನೆ ಮಾಹಿತಿ ನೀಡಿದರು. ಲೋಕೋಪಯೋಗಿ ಕಾರ್ಯಕಾರಿ ಇಂಜಿನಿಯರ್ ಸಿ.ರಾಜೇಶ್ ಚಂದ್ರನ್ ತಾಂತ್ರಿಕ ವರದಿ ಸಲ್ಲಿಸಿದರು. ಶಾಸಕಕೆ.ಕುಂ??ರಾಮನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಿಲಾಖೆ ಸಹಾಯಕ ನಿರ್ದೇಶಕ ಕೆ.ಪಿ.ಅಬ್ದುಲ್ ಖಾದರ್,ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಹಬೀಬ್ ರಹಮಾನ್, ರಾಜ್ಯ ಕಾರ್ಯಕಾರಿ ಸದಸ್ಯ ಬಾಲನ್ ಮಾಣಿಯಾಟ್, ಎಚ್.ಎ.ಎಲ್.ಎ.ಜಿ.ಎಂ. ಸಿ.ಎ.ರಾವ್, ಪ್ರೆಸ್ ಕ್ಲಬ್ ಅಧ್ಯಕ್ಷ ಟಿ.ಎ.ಶಾಫಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ನ್ಯಾಯವಾದಿ ಗೋವಿಂದನ್ ಪಳ್ಳಿಕಾಪಿಲ್,ಕೈಪ್ರತ್ ಕೃಷ್ಣನ್ ನಂಬ್ಯಾರ್, ಕೆ.ವಿ.ಯುಧಿಷ್ಠಿರನ್,ಮಾಟುಮ್ಮಲ್ಹಸನ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಾಗತಿಸಿ, ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ಎಂ.ವಂದಿಸಿದರು.