ಚಿಪ್ಪಾರು ಶಾಲಾ ಶತಮಾನೋತ್ಸವ ಸಂಬಂಧಿ ಕಾರ್ಯಕ್ರಮಗಳ ಸಮಾರೋಪ
0
ಫೆಬ್ರವರಿ 28, 2019
ಉಪ್ಪಳ: ಪೈವಳಿಕೆ ಸಮೀಪದ ಚಿಪ್ಪಾರು ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವದ ಪ್ರಯುಕ್ತ ಕಳೆದ ಒಂದು ವರ್ಷಗಳಿಂದ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ಭಾನುವಾರ ಸಂಜೆ ನಡೆಯಿತು.
ಶಾಲೆಯ ಹಳೆವಿದ್ಯಾರ್ಥಿ, ಉಡುಪಿ ಎಸ್.ಡಿ.ಎಮ್. ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಭಟ್ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಯಾವುದೇ ಸೌಲಭ್ಯಗಳಿಲ್ಲದ ಊರಿನಲ್ಲಿ ಕಷ್ಟಪಟ್ಟು ಬೆವರು ಸುರಿಸಿ ನೂರು ವರ್ಷಗಳ ಹಿಂದೆ ಇಂತಹ ಒಂದು ಸಂಸ್ಥೆಯನ್ನು ಕಟ್ಟಿದ ಹಿರಿಯರ ಪರಿಶ್ರಮವನ್ನು ಉಳಿಸಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಮಹತ್ತರವಾದ ಜವಾಬ್ದಾರಿಯನ್ನು ನಾವು ನಿಭಾಯಿಸಬೇಕು. ಹಿರಿಯರು ಕಟ್ಟಿದ ಈ ವಿದ್ಯಾದೇಗುಲವನ್ನು ಉಚ್ಛ ಸ್ಥಿತಿ ಕೊಂಡೊಯ್ಯಬೇಕಾಗಿದೆ. ಹಿಂದಿನ ಕಾಲದಲ್ಲಿ ಅಧ್ಯಾಪಕರು ಪ್ರೀತಿ ವಾತ್ಸಲ್ಯದ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲುತ್ತಿದ್ದರಲ್ಲದೆ ಆ ಗತಕಾಲದ ನೆನಪು ಅಚ್ಚಳಿಯದೆ ಉಳಿಯುವಂತೆ ಮಾಡಿದ್ದರು ಎಂದರು.
ಶಾಲಾ ವ್ಯವಸ್ಥಾಪಕ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಕೆ.ಗಂಗಾಧರ ಬಲ್ಲಾಳ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಂಗಲ್ಪಾಡಿ ಬಂಟರ ಸಂಘದ ಅಧ್ಯಕ್ಷ ಯಾಮಿನಿ ಎಸ್ಟೇಟ್‍ನ ಶ್ರೀಧರ ಶೆಟ್ಟಿ ಮುಟ್ಟ ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸದೆ ಹಿರಿಯರು ಕಟ್ಟಿದ ಶಾಲೆಯು ಭವ್ಯ ಭಾರತದ ನಿರ್ಮಾಣವನ್ನು ಮಾಡುವಂತಹ ಅನೇಕ ಪ್ರತಿಭಾನ್ವಿತರನ್ನು ಜಗತ್ತಿಗೆ ನೀಡಿದೆ. ಊರಿನ ಮಕ್ಕಳು ವಿದ್ಯಾವಂತರಾಗಬೇಕೆಂಬ ಬಯಕೆಯನ್ನು ಹೊತ್ತು ಹಿರಿಯರಾದ ಕೃಷ್ಣಯ್ಯ ಬಲ್ಲಾಳ್‍ರು ಶಾಲೆಯನ್ನು ನಿರ್ಮಿಸಿರುವುದರಿಂದ ಊರು ಪ್ರಗತಿಯನ್ನು ಕಂಡಿದೆ ಎಂದರು.
ಕಬಡ್ಡಿ ಕ್ರೀಡೆಯ ದೇಶೀಯ ತಂಡದ ಮಾಜಿ ಉಪನಾಯಕ ಭಾಸ್ಕರ ರೈ ಮಂಜಲ್ತೋಡಿ ಮಾತನಾಡಿ, ಜಾತಿ ಮತ ರಾಜಕೀಯವನ್ನು ಮರೆತು ರಕ್ಷಕರು ಹಾಗೂ ಶಿಕ್ಷಕರು ಪರಸ್ಪರ ಹೊಂದಾಣಿಕೆಯಿಂದ ಶಾಲೆಯ ಮೂಲಕ ಊರಿನಲ್ಲಿ ಸಾಮರಸ್ಯ ನೆಲೆಸುವಲ್ಲಿ ಪ್ರಧಾನ ಕಾರಣರಾಗಬೇಕು. ಶಾಲೆಗಳಿಂದ ಕಲೆ, ಕ್ರೀಡೆಗಳು ಸಮೃದ್ಧಿಯನ್ನು ಕಾಣುತ್ತಿದೆ. ಶಾಲೆಯ ಅಭಿವೃದ್ಧಿಯೊಂದಿಗೆ ಕನ್ನಡವನ್ನು ಉಳಿಸುವ ಜವಾಬ್ದಾರಿಯನ್ನು ಊರವರು ವಹಿಸಿಕೊಳ್ಳಬೇಕಾಗಿದೆ ಎಂದರು.
ಶಾಲಾ ಹಳೆವಿದ್ಯಾರ್ಥಿ ಪ್ರಭಾಕರ ಶೆಟ್ಟಿ ಮಾತನಾಡಿ ಪ್ರಖ್ಯಾತ ಚೆಂಡೆವಾದಕ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಚೆಂಡೆನಾದಕ್ಕೆ ಶಾಲೆಯಲ್ಲಿ ತನ್ನ ಪಾತ್ರವನ್ನು ನಿರ್ವಹಿಸಿದ ಅನುಭವವನ್ನು ಹಂಚಿಕೊಂಡ ಅವರು ಹಿರಿಯರ ಸೇವಾಕಾರ್ಯದ ಫಲವನ್ನು ಪಡೆದ ನಾವು ಧನ್ಯರು ಎಂದರು. ಶಾಲಾ ಮುಖ್ಯೋಪಾಧ್ಯಾಯ ದಾಸಪ್ಪ ಶೆಟ್ಟಿ ಶತಮಾನೋತ್ಸವ ನಡೆದು ಬಂದ ದಾರಿಯನ್ನು ವಿವರಿಸಿದರು. ಸೀತಾರಾಮ ಬಲ್ಲಾಳ್, ತಿರುಮಲೇಶ್ವರ ಭಟ್, ವಿಶ್ವನಾಥ ಬಲ್ಲಾಳ್ ಕೆ.ಚಿಪ್ಪಾರು, ಸತೀಶ್ ಬಲ್ಲಾಳ್, ಖಲೀಲ್ ನಾರ್ಣಕಟ್ಟೆ, ಜಯಲಕ್ಷ್ಮೀ, ಜಯರಾಮ ಅಮ್ಮೇರಿ, ಮೋಹನ ಶೆಟ್ಟಿ, ಸಿ.ಕೆ.ಮೂಸಾ ಮೊದಲಾದವರು ಶುಭಹಾರೈಸಿದರು. ಕಾರ್ಯಾಧ್ಯಕ್ಷ ಅಬ್ದುಲ್ ರಝಾಕ್ ಸ್ವಾಗತಿಸಿ, ಅಧ್ಯಾಪಕ ಶೇಖರ ಶೆಟ್ಟಿ ವಂದಿಸಿದರು.