ಅಭಿವೃದ್ದಿ ಜೀವನದ ಗುರಿಯಾಗಬೇಕು-ಡಾ.ಎಲ್.ಎಚ್.ಮಂಜುನಾಥ್
0
ಫೆಬ್ರವರಿ 04, 2019
ವಲಯ ಪದಗ್ರಹಣ ಸಮಾರಂಭದಲ್ಲಿ ಅಭಿಮತ
ಮಂಜೇಶ್ವರ: ಸಮಾಜದಲ್ಲಿ ಎಲ್ಲರಿಗೂ ಮಾದರಿಯಾಗಿ ಬದುಕುವುದು ಯಶಸ್ವಿ ವ್ಯಕ್ತಿಯ ಲಕ್ಷ್ಯವಾಗಿರುತ್ತದೆ. ಪ್ರಾಮಾಣಿಕತೆ, ಸತ್ಯ-ನಿಷ್ಠೆ, ಶಿಸ್ತುಗಳನ್ನು ಜೀವನದಲ್ಲಿ ಅಳವಡಿಸಿ, ಸಂಬಂಧಗಳಿಗೆ ಬೆಲೆ ನೀಡಿ ನ್ಯಾಯಯುತ ಜೀವನ ಸಾಗಿಸಿದಾಗ ನೆಮ್ಮದಿ ಲಭ್ಯವಾಗುತ್ತದೆ. ಅಭಿವೃದ್ದಿಯೇ ನಮ್ಮ ಗುರಿಯಾಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಅವರು ಕರೆನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿ.ಸಿ.ಟ್ರಸ್ಟ್ ಕಾಸರಗೋಡು ಇವುಗಳ ಜಂಟಿ ಆಶ್ರಯದಲ್ಲಿ ಭಾನುವಾರ ಮಂಜೇಶ್ವರದ ಕಲಾಸ್ಪರ್ಶಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಲಪಾಡಿ ವಲಯದ 12 ಸ್ವಸಹಾಯ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ, ಮಂಜೇಶ್ವರ ಮರ್ಸಿ ಅಮ್ಮನವರ ದೇವಾಲಯದ ವೆಲೇರಿಯನ್ ಲೂವೀಸ್, ಉದ್ಯಾವರ ಸಾವಿರ ಜಮಾಅತ್ ಮಸೀದಿಯ ಸೈಯ್ಯದ್ ಅತ್ತಾಪುಲ್ಲಾ ತಂಙಳ್ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಶ್ವಥ್ ಪೂಜಾರಿ ಚಿಪ್ಪಾರು ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕಿಯ ವಲಯ ಪ್ರಬಂಧಕ ರಿಜಿ ಆರ್.ಆರ್. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜೀ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಜನಜಾಗೃತಿ ವೇದಿಕೆಯ ಕೇಂದ್ರ ಘಟಕದ ಚಂದ್ರಶೇಖರ ನೆಲ್ಯಾಡಿ ಉಪಸ್ಥಿತರಿದ್ದರು. ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸುಖಲತಾ ವಂದಿಸಿದರು. ಮಧುರಾ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಮೋಹನ ವರದಿ ಮಂಡಿಸಿದರು.