HEALTH TIPS

ಶಾಲೆಯು ಬದುಕಿಗೆ ಬೆಳಕನ್ನು ನೀಡುವ ದೇವಾಲಯ : ಒಡಿಯೂರು ಶ್ರೀ

ಉಪ್ಪಳ: ಮಾನವೀಯ ಮೌಲ್ಯದ ಕೊಂಡಿಗಳನ್ನು ಗಟ್ಟಿಗೊಳಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳಿಂದ ಆದರೆ ಮಾತ್ರ ಸಮಾಜ ಪ್ರಗತಿಯನ್ನು ಕಾಣಬಲ್ಲುದು. ಹಿರಿಯರ ಶ್ರಮದ ಫಲವಾಗಿ ಇತಿಹಾಸದ ಪುಟಗಳಲ್ಲಿ ಬರೆದಿಡಬೇಕಾದ ಸಂಭ್ರಮಕ್ಕೆ ಇಂದು ನಾವು ಸಾಕ್ಷಿಯಾಗಿದ್ದೇವೆ. ಮಾನವೀಯ ಮೌಲ್ಯಗಳನ್ನು ವೃದ್ಧಿಸುವ ಸಂಸ್ಕøತಿಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಾಲೆಯೆಂದರೆ ಬದುಕಿಗೆ ಬೆಳಕನ್ನು ನೀಡುವ ಸರ್ವರ ದೇವಾಲಯವಾಗಿದೆ ಎಂದು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ನುಡಿದರು. ಅವರು ಚಿಪ್ಪಾರು ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರೋಪದ ಸಭಾ ಕಾರ್ಯಕ್ರಮ ಹಾಗೂ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಚಿಪ್ಪಾರು ನಡುವಳಚ್ಚಿಲ್ ದೇರಣ್ಣ ಶೆಟ್ಟಿಯವರ ಪುತ್ರಿ ಬೊಳುವಾಯಿ ಕುಂಞ ರೈ ಭಂಡಾರಿಯವರ ದರ್ಮಪತ್ನಿ ಶಾಲಾ ಹಳೆ ವಿದ್ಯಾರ್ಥಿನಿ ಅಕ್ಕಮ್ಮನವರ ಸ್ಮರಣಾರ್ಥ ಬೊಳುವಾಯಿ ಮಹಾಬಲ ಭಂಡಾರಿಯವರ ನೇತೃತ್ವದಲ್ಲಿ ಮಕ್ಕಳು ಮತ್ತು ಮೊಮಕ್ಕಳು ಶಾಲೆಗೆ ಕೊಡಮಾಡಿದ ಶಾಶ್ವತ ನೀರಿನ ವ್ಯವಸ್ಥೆಯನ್ನು ಉದ್ಘಾಟಿಸಿ ಆಶೀರ್ವಚನವನ್ನು ನೀಡಿದರು. ಜೀವನ ಮೌಲ್ಯವನ್ನು ತುಂಬುವಂತಹ ಶಿಕ್ಷಣದ ಮೂಲಕ ಬದುಕನ್ನು ರೂಪಿಸಿಕೊಳ್ಳುವ ಚಿಂತನೆ ಆಗಬೇಕಾಗಿದೆ. ಮುಂದಿನ ಪೀಳಿಗೆಗೆ ಸಿದ್ಧರಾಗುವ ಮಕ್ಕಳಲ್ಲಿ ಮೌಲ್ಯವನ್ನು ತುಂಬುವ ಕಾರ್ಯದಿಂದ ಭವ್ಯ ಭಾರತದ ನಿರ್ಮಾಣವಾಗಲಿದೆ. ವಿದ್ಯೆಯ ಅಂತರ್ಯ ವಿನಯದಿಂದ ಕೂಡಿರಬೇಕು ಎಂದರು. ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ದೀಪಪ್ರಜ್ವಲನೆಗೈದು ಉದ್ಘಾಟಿಸಿ ಮಾತನಾಡಿ ಪ್ರತಿಭಾನ್ವಿತರನ್ನು ನಾಡಿಗೆ ನೀಡಿದ ಕೀರ್ತಿಯನ್ನು ಪಡೆದ ಈ ಶಾಲೆಯು ಊರ ಜನರ ಪರಿಶ್ರಮದಿಂದ ಅಭಿವೃದ್ಧಿಯನ್ನು ಕಾಣುತ್ತಿದೆ. ಶಾಲೆಗೆ ಮಕ್ಕಳನ್ನು ಕಳುಹಿಸುವ ಮೂಲಕ ಶಾಲೆಯನ್ನು ಉಳಿಸುವಲ್ಲಿಯೂ ಊರವರು ಕಾರಣರಾಗಬೇಕಾಗಿದೆ ಎಂದರು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸೀತಾರಾಮ ಬಲ್ಲಾಳ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಚೇರಾಲು ಫೈಜಿ ಸಿರಾಜುದ್ದೀನ್ ಮಾತನಾಡಿ ಸರ್ವರೂ ಜಾತಿ ಮತ ಧರ್ಮ ಬೇಧವನ್ನು ಮರೆತು ಪರಸ್ಪರ ಸಹೋದರತೆಯ ಭಾವನೆಯಿಂದ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ. ತಾಯಿ ತನ್ನ ಮಗುವಿಗೆ ನೀಡುವ ಪ್ರೀತಿಯನ್ನು ನಾವು ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಯ್ಯಾರು ಕ್ರಿಸ್ಟ್ ದಿ ಕಿಂಗ್ ಚರ್ಚ್‍ನ ರೆ.ಫಾ. ವಿಕ್ಟರ್ ಡಿ'ಸೋಜ ಮಾತನಾಡಿ ಹಳ್ಳಿಯ ಶಾಲೆಯೊಂದು ಪ್ರಕಾಶಮಾನವಾದ ಬೆಳಕನ್ನು ಊರಿನ ಜನತೆಗೆ ನೀಡಿದೆ. ಜನರು ಸನ್ಮಾರ್ಗದಲ್ಲಿ ನಡೆಯಬೇಕಾದರೆ ಅದಕ್ಕೆ ಪ್ರಧಾನ ಕಾರಣವಾಗಿ ಆ ಊರಿನ ಶಾಲೆಯು ಗೋಚರಿಸುತ್ತದೆ ಎಂದರು. ಶಾಲೆಯ ಹಳೆವಿದ್ಯಾರ್ಥಿ, ಕಲ್ಲಿಕೋಟೆ ಮಲಬಾರ್ ಆಸ್ಪತ್ರೆಯ ಹೃದಯ ತಜ್ಞ ಡಾ.ಕುಂಞÁಲಿ, ವಾಯು ಸೇನೆಯ ನಿವೃತ್ತ ಅಧಿಕಾರಿ ಮಹಾಬಲ ಭಂಡಾರಿ, ಹಳೆವಿದ್ಯಾರ್ಥಿ ಡಾ.ತಿರುಮಲೇಶ್ವರ ಕುಳೂರು, ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ಅಬ್ದುಲ್ ರಹಿಮಾನ್, ಕೃಷ್ಣ ಶೆಟ್ಟಿಗಾರ್, ಅಭಯಂ ಚಾರಿಟೇಬಲ್ ಟ್ರಸ್ಟ್‍ನ ಕಯ್ಯೂಂ ಮಾನ್ಯ, ಗ್ರಾ.ಪಂ. ಸದಸ್ಯೆ ರಜಿಯಾ ರಸಾಕ್, ಆಡಳಿತ ಮಂಡಳಿ ಸದಸ್ಯ ರಘುಚಂದ್ರ ಬಲ್ಲಾಳ್ ಮಾತನಾಡಿದರು. ಶಾಲಾ ವ್ಯವಸ್ಥಾಪಕ ಗಂಗಾಧರ ಬಲ್ಲಾಳ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಖಲೀಲ್, ಮಾತೃ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ, ಮುಖ್ಯೋಪಾಧ್ಯಾಯ ದಾಸಪ್ಪ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಅಧ್ಯಾಪಿಕೆ ವಿದ್ಯಾಲಕ್ಷ್ಲೀ ವಾರ್ಷಿಕ ವರದಿಯನ್ನು ಮಂಡಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಯನ್ನು ಹಾಡಿದರು. ಅಧ್ಯಾಪಕ ಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ತಿರುಮಲೇಶ್ವರ ಭಟ್ ಸ್ವಾಗತಿಸಿ, ಅಧ್ಯಾಪಕ ರಾಮಕೃಷ್ಣ ಕೆ.ಬಿ. ವಂದಿಸಿದರು. ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries