ಪೆರ್ಲ: ಭಗವಂತನ ಅಂಶಗಳು ವಿವಿಧ ಯೋನಿಗಳಲ್ಲಿ, ಅಂಡಗಳಲ್ಲಿ ಮತ್ತು ಬೀಜಗಳಲ್ಲಿ ಅವತರಿಸುತ್ತಾನೆ. ಧರ್ಮಸಂರಕ್ಷಣೆಗಾಗಿ, ಶಿಷ್ಟರ ಪಾಲನೆಗಾಗಿ ಅವತರಿಸಿ ಬರುವೆನೆಂಬುದೂ ಭಗವಾನ್ ಶ್ರೀಕೃಷ್ಣನ ಸಂದೇಶ. ಭರತ ಖಂಡದ ವಿವಿಧೆಡೆ ಭಗವಂತನು ಕಾಲಾಕಾಲಕ್ಕೆ ಜನಿಸಿ ಧರ್ಮಸಂರಕ್ಷಣೆಯನ್ನು ನಿರ್ವಹಿಸಿದ್ದಾನೆ. ಈ ಪೈಕಿ ರಾಷ್ಟ್ರದ ಉದ್ದಗಲ ಸಂಚರಿಸಿ, ಚರುರಾಮ್ನಾಯಗಳನ್ನು ರಚಿಸಿ ಧರ್ಮ ಸಂಘರ್ಷಗಳಿಗೆ ಕೊನೆ ತಂದವರಲ್ಲಿ ಆದಿ ಶಂಕರರು ಪ್ರಮುಖ ಕಾರಣರಾಗಿದ್ದಾರೆ ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ತಿಳಿಸಿದರು.
ಇಡಿಯಡ್ಕ ಶ್ರೀದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಮತ್ತು ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಆತ್ಮೋನ್ನತಿಗೆ ಪೂರಕವಾದ ವಿಚಾರಧಾರೆಗಳು, ತತ್ವಗಳು ಬದುಕನ್ನು ನೋವು ರಹಿತಗೊಳಿಸುವುದು. ಕೆಟ್ಟ ಮಗನಾದರೂ ಜನಿಸಬಹುದು ಆದರೆ ಕೆಟ್ಟ ತಾಯಿಯಲ್ಲ ಎಂಬ ತತ್ವದ ಮೂಲಕ ಆದಿ ಶಂಕರರು ನೀಡಿರುವ ಉದಾತ್ತ ಸಂದೇಶದ ಹಿಂದೆ ಮಾತೆಯ ಮಹತ್ವವನ್ನು ಎತ್ತಿ ತೋರಿಸಲಾಗಿದೆ. ಮನೆ-ಮನಗಳ ಬೆಳಕಾದ ಮಾತೆಯರು ಸಂಸ್ಕøತಿ-ಸಂಸ್ಕಾರಗಳ ವಾಹಕರಾಗಿ ಮುನ್ನಡೆಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದಲ್ಲಿ ನಮ್ಮ ಸಂಸ್ಕøತಿಗೆ ಯಾವ ತೊಡಕುಗಳೂ ಸಂಭವಿಸದು ಎಂದು ಅವರು ಈ ಸಂದರ್ಭ ತಿಳಿಸಿದರು. ದೈತ ಸಿದ್ದಾಂತ ಪ್ರತಿಪಾದಕರಾದ ಆಚಾರ್ಯ ಮದ್ವರೂ ಇದೇ ತತ್ವವನ್ನು ತಿಳಿಸಿದ್ದಾರೆ. ವಿವಿಧ ನದಿಗಳು ಎಲ್ಲೆಲ್ಲಿ ಹರಿದರೂ ಕೊನೆಗೆ ತಲಪುವ ಗಮ್ಯ ಸ್ಥಾನ ಕಡಲೇ ಆಗಿರುವಂತೆ ಎಲ್ಲಾ ವೈದಿಕ, ಧಾರ್ಮಿಕ ಚಿಂತನೆಗಳ ಫಲಶ್ರುತಿ ಪರಬ್ರಹ್ಮನ ಸಾಕ್ಷಾತ್ಕಾರ, ಸಾಯುಜ್ಯವೇ ಆಗಿದೆ ಎಂದು ತಿಳಿಸಿದರು.
ದೇಲಂಪಾಡಿ ಶ್ರೀಮಹಾಲಿಂಗೇಶ್ವರ ದೇವಳದ ಸೇವಾ ಸಮಿತಿ ಅಧ್ಯಕ್ಷ ಶಂಕರ ರೈ ಮಾಸ್ತರ್ ಮಂಟಪ್ಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ, ಪಂಗಡ, ರಾಜಕೀಯಗಳನ್ನು ಮರೆತು ಧರ್ಮ ಸಂರಕ್ಷಣೆ, ದೈವಿಕ ಸಾನ್ನಿಧ್ಯಗಳ ಶಕ್ತಿ ವೃದ್ದಿಗೆ ಪ್ರತಿಯೊಬ್ದ ಆಸ್ತಿಕರೂ ಒಗ್ಗಟ್ಟಾಗಬೇಕು ಎಂದು ತಿಳಿಸಿದರು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಉಪಸ್ಥಿತರಿದ್ದು ಮಾತನಾಡಿದರು. ಶ್ರೀಕ್ಷೇತ್ರ ಮಲ್ಲದ ಧರ್ಮದರ್ಶಿ ಆನೆಮಜಲು ವಿಷ್ಣು ಭಟ್ ಅವರ ಘನ ಉಪಸ್ಥಿತಿಯಲ್ಲಿ ಅಗಲ್ಪಾಡಿ ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ವಾಸುದೇವ ಭಟ್, ಬಾಯಾರು ಸಮೀಪದ ಆವಳಮಠ ಶ್ರೀಕ್ಷೇತ್ರದಮೊಕ್ತೇಸರ ಗಣಪತಿ ಭಟ್, ಬೆಂಗಳೂರಿನಲ್ಲಿರುವ ಅಪರಾಧ ಪತ್ತೆ ವಿಭಾಗ ಸಿ.ಬಿ.ಐ ಯ ಹಿರಿಯ ಅಧಿಕಾರಿ ಶಿವಾನಂದ ಪೆರ್ಲ, ಪರ್ತಿಕ್ಕಾರ್ ಶ್ರೀಚಾಮುಮಡಿ ಕ್ಷೇತ್ರದ ಕೃಷ್ಣ ಮುಖಾರಿ, ರಮಾನಾಥ ರೈ ಕಡಾರು ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು.
ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಭೇಟಿ ನೀಡಿ ಆಶೀರ್ವಚನಗೈದು ಮಾತನಾಡಿ, ಮನೋಸ್ಥೈರ್ಯ, ಸತ್ ಚಿಂತನೆಗಳ ಭಾವಶುದ್ದಿಯು ಪ್ರತಿಯೊಬ್ದರಲ್ಲೂ ಉಂಟಾಗುವಂತೆ ಭಗವದನುಗ್ರಹ ಪ್ರಾಪ್ತಿಯಾಗಲಿ ಎಮದು ಹರಸಿದರು.
ಉದಯಶಂಕರ ಮಾಸ್ತರ್ ಸ್ವಾಗತಿಸಿ, ವೇಣುಗೋಪಾಲ ಮಾಸ್ತರ್ ವಂದಿಸಿದರು. ಸುಮಿತ್ರಾ ಜೆ.ಸಿ.ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪೆರ್ಲದ ಶಿವಾಂಜಲಿ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ-ಜನಪದ ನೃತ್ಯ ಹಾಗೂ ಭಸ್ಮಾಸುರ ಮೋಹಿನಿ ನೃತ್ಯ ರೂಪಕ ಪ್ರದರ್ಶನಗೊಂಡಿತು.
ಭಾನುವಾರ ಬೆಳಿಗ್ಗೆ 6ಕ್ಕೆ ಚಂಡಿಕಾ ಹವನ, ಭಜನಾ ಸತ್ಸಂಗ, ಚಂಡಿಕಾ ಹವನದ ಪೂರ್ಣಾಹುತಿ, ತುಲಾಭಾರ ಸೇವೆ, ಮಹಾಪೂಜೆ ನಡೆಯಿತು. ಅಪರಾಹ್ನ ಭಜನಾ ಸಂಕೀರ್ತನೆ, ಸಂಜೆ 6 ರಿಂದ ಕಜಂಬು ಸೇವೆ, ಮಹಾಪೂಜೆ, ರಾತ್ರಿ 8 ರಿಂದ ಶ್ರೀಉಳ್ಳಾಲ್ತಿ ದೈವದ ಭಂಡಾರ ಹೊರಡುವುದು, ಅಶ್ವರಥ ಸವಾರಿ, ಶ್ರೀಉಳ್ಳಾಲ್ತಿ ನೇಮ, ಪ್ರಸಾದ ವಿತರಣೆ ನಡೆಯಿತು.
ಇಂದಿನ ಕಾರ್ಯಕ್ರಮ:
- ಸೋಮವಾರ ಬೆಳಿಗ್ಗೆ 8ಕ್ಕೆ ಶ್ರೀಸತ್ಯನಾರಾಯಣ ಪೂಜೆ, ಬಳಿಕ ಭಜನಾ ಸಂಕೀರ್ತನೆ, ಅಪರಾಹ್ನ 4 ರಿಂದ ಬದಿಯಡ್ಕದ ಶ್ರೀಶಾರದಾಂಬಾ ಯಕ್ಷಗಾನ ಕಲಾಸಂಘದವರಿಂದ ಮಹಿಷಮರ್ಧಿನಿ ಯಕ್ಷಗಾನ ಬಯಲಾಟ, 7 ರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 7.30ಕ್ಕೆ ಮಹಾಪೂಜೆ, 8ಕ್ಕೆ ವಿಷ್ಣುಮೂರ್ತಿ ದೈವದ ಭಂಡಾರ ಹೊರಡುವುದು, 8.30ಕ್ಕೆ ದೈವಗಳ ತೊಡಂಙಲ್, ಬಳಿಕ ಮೇಲರಿಗೆ ಅಗ್ನಿಸ್ಪರ್ಶ, 12ರಿಂದ ಕುಳಿಚ್ಚಾಟ, ಬೆಡಿಸೇವೆ ನಡೆಯಲಿದೆ. ಜೊತೆಗೆ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8/30 ರಿಂದ ಪ್ರಸಿದ್ದ ಗಾಯಕ-ಗಾಯಕಿಯರಿಂದ ಮ್ಯೂಸಿಕಲ್ ನೈಟ್, 11 ರಿಂದ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಮಂಗಳವಾರ ಮುಂಜಾನೆ 4ಕ್ಕೆ ಕೆಂಡಸೇವೆ, ಪ್ರಸಾದ ವಿತರಣೆ, ಮಧ್ಯಾಹ್ನ 12ಕ್ಕೆ ಧ್ವಜಾವರೋಹಣ, ಮಹಾಪೂಜೆಯೊಂದಿಗೆ ಉತ್ಸವಗಳು ಸಂಪನ್ನಗೊಳ್ಳಲಿದೆ.