ಕಿದೂರು ಶಾಲೆಯಲ್ಲಿ ಕಲಿಕೋತ್ಸವ
0
ಫೆಬ್ರವರಿ 28, 2019
ಕುಂಬಳೆ: ವಿದ್ಯಾರ್ರ್ಥಿಗಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡಬೇಕಾದ ಹೊಣೆ ಅಧ್ಯಾಪಕರ ಹಾಗೂ ಹೆತ್ತವರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಕೇಂದ್ರಗಳನ್ನು ಉಳಿಸಿ ಕಾಪಾಡಬೇಕಾದುದು ಹೆತ್ತವರ, ಊರವರ ಕರ್ತವ್ಯ ಎಂದು ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅವರು ತಿಳಿಸಿದರು.
ಕಿದೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಕಲಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾ.ಪಂ.ಸದಸ್ಯ ಸುಕೇಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ಕೆ.ವಿ ಈ ಸಂದರ್ಭ ಶಾಲೆಯ ಗಣಿತ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಇತ್ತೀಚೆಗೆ ಅಭಿವೃದ್ದಿಯಲ್ಲಿ ವೇಗ ಹೊಂದಿದ್ದು ಹಿರಿಮೆಯ ಕೇಂದ್ರಗಳಾಗುತ್ತಿವೆ ಎಂದು ತಿಳಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವೆಂಕಪ್ಪ ಶೆಟ್ಟಿ, ಸಂಯೋಜಕ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸೌಮ್ಯಲತಾ ಸ್ವಾಗತಿಸಿ,ಶಿಕ್ಷಕ ವಸಂತ ಎಂ.ವಂದಿಸಿದರು. ಹಿರಿಯ ಶಿಕ್ಷಕ ರಾಮು ಮಾಸ್ತರ್ ನಿರೂಪಿಸಿದರು. ಶಿಕ್ಷಕಿಯರಾದ ಜಯಶ್ರೀ, ಪ್ರಜ್ಞಾ, ಕರೀಷ್ಮಾ ಮೊದಲಾದವರು ವಿದ್ಯಾರ್ಥಿಗಳ ಕಲಿಕಾ ಸಾಧನೆಗಳನ್ನು ಹೆತ್ತವರ ಮುಂದೆ ಪ್ರದರ್ಶಿಸಲು ನೆರವು ನೀಡಿದರು.