ಪಡ್ರೆಚಂದು ಯಕ್ಷಗಾನ ಕೇಂದ್ರ ವಾರ್ಷಿಕೋತ್ಸವ-ನುಡಿನಮನ-ಪ್ರಶಸ್ತಿ ಪ್ರಧಾನ
0
ಫೆಬ್ರವರಿ 25, 2019
ಪೆರ್ಲ: ಶಾಸ್ತ್ರೀಯ ನಾಟ್ಯದೊಂದಿಗೆ ಯಕ್ಷಗಾನದಲ್ಲಿ ಸಮರ್ಥ ವೇಶಧಾರಿಯಾಗಿ ಪಾತ್ರ ನಿರ್ವಹಿಸುವ ಮೂಲಕ ನವರಸ ನಾಯಕ ಎಂಬ ಹೆಸರು ದಿ.ಪಡ್ರೆ ಚಂದು ಅವರಿಗೆ ಖ್ಯಾತಿ ತಂದಿತ್ತಿತು. ಕೃಷ್ಣ, ರಾಮ, ಭ್ರಮರಕುಂತಳೆ, ಕೌರವ ಮೊದಲಾದ ಪಾತ್ರಗಳನ್ನು ತನ್ನದೇ ವಿಶಿಷ್ಟ ಶೈಲಿಯಲ್ಲಿ ಸಮರ್ಥರಾಗಿ ನಿರೂಪಿಸಿದ ಕಲಾವಿದ ಮಾತ್ರವಲ್ಲದೆ ಇಂದಿನ ಯಕ್ಷಗಾನ ಬಯಲಾಟಗಳಲ್ಲಿ ಕಾಣಿಸುವ ವೇಶಧಾರಿಗಳೆಲ್ಲ ಪಡ್ರೆ ಚಂದು ಅವರ ಶಿಷ್ಯರು ಎನ್ನುವುದು ಅವರ ಧೀಮಂತಿಕೆಯ ಪ್ರತೀಕ ಎಂದು ಹಿರಿಯ ಕಲಾ ಪೋಷಕ ಕೋಟೆ ರಾಮ ಭಟ್ ಅವರು ತಿಳಿಸಿದರು.
ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಹದಿನಾಲ್ಕನೇ ವರ್ಷದ ವಾರ್ಷಿಕೋತ್ಸವ, ಪಡ್ರೆಚಂದು ಜನ್ಮ ಶತಮಾನೋತ್ಸವ ಉದ್ಘಾಟನೆ, ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಮಕ್ಕಳ ಯಕ್ಷಗಾನ ಬಯಲಾಟ ಕಾರ್ಯಕ್ರಮವನ್ನು ಶನಿವಾರ ಕೇಂದ್ರ ಪರಿಸರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನ ಕ್ಷೇತ್ರದಲ್ಲಿ ಗುರುವಾಗಿ, ಕಲಾವಿದರಾಗಿ ಗಡಿನಾಡಿನ ಕೀರ್ತಿ ಶಿಖರವನ್ನು ಎತ್ತರಕ್ಕೇರಿಸಿದ ದಿ.ಪಡ್ರೆ ಚಂದು ಅವರ ಕಲಾ ಜೀವನ ಮಹತ್ವಪೂರ್ಣವಾಗಿ ದಾಖಲಾಗಬೇಕು. ಸಮಗ್ರ ಕಲಾ ಕ್ಷೇತ್ರದ ಪ್ರಬುದ್ದತೆಗೆ ಜೀವನವನ್ನು ಸವೆಸಿದ ಹಿರಿಯ ಚೇತನಗಳ ಸ್ಮರಣೆ ಇಂದಿಗೆ ಅಗತ್ಯವಿದೆ ಎಂದು ಅವರು ಈ ಸಂದರ್ಭ ನುಡಿ ನಮನ ಸಲ್ಲಿಸಿದರು.
ಶ್ರೀರಾಮ ಪ್ರಸಾದ್ ಕಾಂಚೋಡು ಅಧ್ಯಕ್ಷತೆ ವಹಿಸಿದ್ದರು. ಭಾಗವತ ಪದ್ಯಾಣ ಗಣಪತಿ ಭಟ್ ಅವರಿಗೆ ಪಡ್ರೆ ಚಂದು ಪ್ರಶಸ್ತಿ, ಉಬರಡ್ಕ ಉಮೇಶ ಶೆಟ್ಟಿ ಅವರಿಗೆ ಅಡ್ಕಸ್ಥಳ ಪ್ರಶಸ್ತಿ, ವಿಶೇಷ ಪ್ರಶಸ್ತಿಯನ್ನು ರಾಧಾಕೃಷ್ಣ ಮಾಸ್ತರ್ ಪೈವಳಿಕೆ ಅವರಿಗೆ ಈ ಸಂದರ್ಭ ಪ್ರಧಾನ ಮಾಡಲಾಯಿತು. ದೇವಕಾನ ಕೃಷ್ಣ ಭಟ್, ಎಂ.ಕೆ.ರಾಮಚಂದ್ರ ಭಟ್, ಶ್ರೀನಿವಾಸ ಭಟ್ ಸೇರಾಜೆ ಅವರು ಪ್ರಶಸ್ತಿ ಪುರಸ್ಕøತರ ಅಭಿನಂದನಾ ಭಾಷಣಗೈದರು.
ವಿನೋದ್ ಅಡ್ಕಸ್ಥಳ, ಡಾ.ಎಸ್.ಎನ್.ಭಟ್, ಶಾಂತಾ ರವಿ ಕುಂಟಿನಿ, ಅರವಿಂದ ಮಾಸ್ತರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕೇಂದ್ರದ ನಿರ್ದೇಶಕ, ಗುರು ಸಬ್ಬಣಕೋಡಿ ರಾಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ವಂದಿಸಿದರು. ಜ್ಯೋಸ್ನ್ಸಾ ಎಂ. ಕಡಂದೇಲು, ಉಷಾದೇವಿ ಕುಂಚಿನಡ್ಕ ಹಾಗೂ ವೆಂಕಟರಮಣ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ, ಶ್ರೀಕೃಷ್ಣ ವಿಜಯ, ಅತಿಥಿ ಕಲಾವಿದರುಗಳಿಂದ ಇಂದ್ರಜಿತು ಕಾಳಗ ಹಾಗೂ ದಿಲೀಪ ಚರಿತ್ರೆ ಯಕ್ಷಗಾನ ಪ್ರಸಂಗಗಳ ಬಯಲಾಟ ಪ್ರದರ್ಶನಗೊಂಡಿತು.