ಜಿಲ್ಲೆಯಲ್ಲಿ "ಮಾತೃಯಾನಂ" ಯೋಜನೆ ಆರಂಭ
0
ಫೆಬ್ರವರಿ 25, 2019
ಕಾಸರಗೋಡು: ಸರಕಾರಿ ಆಸ್ಪತ್ರೆಗಳಿಗೆ ಹೆರಿಗೆಗಾಗಿ ಆಗಮಿಸುವವರನ್ನು ತದನಂತರ ವಾಹನದ ಮೂಲಕ ಉಚಿತವಾಗಿ ಮನೆ ತಲಪಿಸುವ "ಮಾತೃಯಾನಂ" ಯೋಜನೆ ಜಿಲ್ಲೆಯಲ್ಲಿ ಆರಂಭಗೊಂಡಿದೆ.
ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ಸಂಬಂಧ ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತಿರುವ ಸರಣಿ ಕಾರ್ಯಕ್ರಮಗಳ ಅಂಗವಾಗಿ ಈ ಯೋಜನೆಗೆ ಚಾಲನೆ ನೀಡಲಾಗಿದೆ.
ಕಾಞಂಗಾಡ್ ಅಲಾಮಿಪಳ್ಳಿ ಬಸ್ ನಿಲ್ದಾಣಾವರಣದಲ್ಲಿ ನಡೆದ ಸಮಾರಂಭದಲ್ಲಿ ಯೋಜನೆಯ ವಾಹನಕ್ಕೆ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಹಸುರು ನಿಶಾನೆ ತೋರಿದರು.
"ತಾಯಿ ಮತ್ತು ಮಗು" ಯೋಜನೆ ಪ್ರಕಾರ ಗರ್ಭಿಣಿಯರಿಗೆ ಉಚಿತ ವೈದ್ಯಕೀಯ ತಪಾಸಣೆ, ಉಚಿತ ಚಿಕಿತ್ಸೆ, ಔಷಧ ಉಚಿತ ವಿತರಣೆ ಇತ್ಯಾದಿಗಳ ಜೊತೆಗೆ ರಾಷ್ಟ್ರೀಯ ಆರೋಗ್ಯ ದೌತ್ಯ ಮತ್ತು ರಾಜ್ಯ ಸರಕಾರಿ ಆರೋಗ್ಯ ಇಲಾಖೆಯ "ತಾಯಿ ಮತ್ತು ಮಗು" ಯೋಜನೆ ಪ್ರಕಾರ ಮನೆಗೆ ತಲಪಿಸುವ "ಮಾತೃಯಾನಂ" ಯೋಜನೆ ಈಗ ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಮತ್ತು ಕಾಸರಗೋಡು ಜನರಲ್ ಆಸ್ಪತ್ರೆಗಳಲ್ಲಿದೆ. ಇದಕ್ಕಾಗಿ ಎರಡು ವಾಹನಗಳು ಸಿದ್ಧವಾಗಿವೆ.
ಸಮಾರಂಭದಲ್ಲಿ ಶಾಸಕ ಕೆ.ಕುಂಞಿರಾಮನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಜಿಲ್ಲಾ ವೈದ್ಯಾಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.