ಸಮಾಜ ಸೇವೆ ಹವ್ಯಾಸವಾಗಿರಲಿ : ಲೋಕೇಶ್ ಅಣಂಗೂರು
0
ಫೆಬ್ರವರಿ 28, 2019
ಕಾಸರಗೋಡು: ಸಮಾಜ ಸೇವೆಯನ್ನು ಯುವ ಜನತೆ ಹವ್ಯಾಸವಾಗಿಸಿ ಕೊಂಡಾಗ ಪ್ರತೀ ಸಮಾಜದ ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿ ಸಾಧ್ಯವೆಂದು ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕಾಸರಗೋಡು ಇದರ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಅಣಂಗೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಸದುರ್ಗ ನಾಯ್ಕರ ಹಿತ್ತಿಲು ಶ್ರೀ ಮಲ್ಲಿಕಾರ್ಜುದ ದೇವಳದ ಗೌರೀಶಂಕರ ಸಭಾಂಗಣದಲ್ಲಿ ಆಯೋಜಿಸಿದ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಕಾಸರಗೋಡು ಜಿಲ್ಲಾ ಯುವ ಸಂಘದ ಸಮಾಜಮುಖೀ ಯೋಜನೆಗಳ ಚಿಂತನ ಮಂಥನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ವಧೂವರರ ಅನ್ವೇಷಣೆ, ಶಿಕ್ಷಣ, ಉದ್ಯೋಗ ಸೃಷ್ಟಿ ಬಗ್ಗೆ ಮಾಹಿತಿ, ಅಂತರ್ಜಾಲ, ತಂತ್ರಜ್ಞಾನದ ದುರ್ಬಳಕೆ, ದುಶ್ಚಟ ಮುಂತಾದ ಮಹತ್ವಪೂರ್ಣ ವಿಚಾರಗಳ ಬಗ್ಗೆ ಮುಕ್ತ ಸಂವಾದಕ್ಕೆ ವೇದಿಕೆ ಸಲ್ಲಿಸುವ ಮೂಲಕ ಯುವ ಜನತೆಯನ್ನು ಆಕರ್ಷಿಸುವಲ್ಲಿ ಕಾರ್ಯಕ್ರಮ ಆಯೋಜಕರು ಯಶಸ್ವಿಯಾಗಿದ್ದಾರೆ ಎಂದು ಅವರು ಶ್ಲಾಘಿಸಿದರು.
ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗಣ್ಯರ ಸಹಿತ ನೆರೆದ ಸಭಿಕರೆಲ್ಲರು ಎದ್ದು ನಿಂತು ಎರಡು ನಿಮಿಷ ಮೌನ ಪ್ರಾರ್ಥನೆಯ ಜೊತೆಗೆ ಶ್ರದ್ಧಾಂಜಲಿ ಸಲ್ಲಿಸಿದರು. ತರುವಾಯ ಕಾರ್ಯಕ್ರಮ ಪ್ರಾರಂಭವಾಯಿತು.
ಭಾರತೀಯ ಸೇನೆಯ ನಿವೃತ್ತ ಸೇನಾಧಿಕಾರಿ ಶಿವಕೃಷ್ಣ ಪ್ರಸಾದ್ ಮಲ್ಲಿಗೆಮಾಡು ಅವರು ಗಡಿಯಲ್ಲಿ ಕಾಯುವ ವೀರ ಯೋಧರ ತ್ಯಾಗ ಬಲಿದಾನದ ಕುರಿತಾಗಿ ತಮ್ಮ ಅನುಭವ ಹಂಚಿಕೊಂಡರು. ದೇಶ ಸೇವೆಯಲ್ಲಿ ಯುವಕರು ತೊಡಗಿಸಿಕೊಳ್ಳಬೇಕಾದ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ಚಿತ್ತಾರಿ ಉಪಸಂಘದ ಅಧ್ಯಕ್ಷರಾದ ಶ್ರೀಧರ ಕಲ್ಲಿಂಗಾಲ್ ಅವರು ಅಧ್ಯಕ್ಷತೆ ವಹಿಸಿದರು. ಜನಾರ್ಧನ ನಾಯ್ಕರ ಹಿತ್ತಿಲು, ಸುಬ್ರಾಯ ಕಲ್ಲಿಂಗಾಲ್, ಪ್ರಭಾಶಂಕರ ಬೇಲೆಗದ್ದೆ, ರಮೇಶ ನಾಯ್ಕರ ಹಿತ್ತಿಲು, ಉಷಾ ಟೀಚರ್, ವಿಜಯ ಟಿ.ರಾವ್ ಉಪಸ್ಥಿತರಿದ್ದರು.
ಪುಟಾಣಿಗಳಾದ ಕೌಶಿಕ್, ರಶ್ಮಿ, ಪವನ್, ಜಿತೇಶ್ ಪ್ರಾರ್ಥನೆ ಹಾಡಿದರು. ಜಿಲ್ಲಾ ಯುವ ಸಂಘದ ಉಪಾಧ್ಯಕ್ಷರಾದ ಧನರಾಜ ಕುಂಬ್ಳೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೀಪಕ್ ಕಲ್ಲಿಂಗಾಲ್ ಸ್ವಾಗತಿಸಿದರು. ಸಾಹಿತಿ ಚಂದ್ರಹಾಸ ಎಂ.ಬಿ.ಚಿತ್ತಾರಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಬಿ.ಮಲ್ಲಿಗೆಮಾಡು ವಂದಿಸಿದರು.