ಎನ್ ಆರ್ ಸಿ ಪ್ರಕ್ರಿಯೆ ವಿಳಂಬ ಉದ್ದೇಶಪೂರ್ವಕ: ಕೇಂದ್ರಕ್ಕೆ ಸುಪ್ರೀಂ ತರಾಟೆ
0
ಫೆಬ್ರವರಿ 05, 2019
ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಂಗಳವಾರ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಕೆಲಸ ಮುಂದುವರೆಸಲು ಉದ್ದೇಶಪೂರ್ವಕವಾಗಿಯೇ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕೇಂದ್ರ ಶಶಸ್ತ್ರ ಪೊಲೀಸ್ ಪಡೆಗಳು ಚುನಾವಣಾ ಕರ್ತವ್ಯದ ಮೇಲೆ ಇರುವುದರಿಂದ ಎನ್ ಆರ್ ಸಿ ಪ್ರಕ್ರಿಯೆಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸಲು ಅನುಮತಿ ಕೋರಿ ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಎನ್ ಆರ್ ಸಿ ಪ್ರಕ್ರಿಯೆ ಮುಂದುವರೆಯಲು ಕೆಲ ಸಿಬ್ಬಂದಿಗೆ ಚುನಾವಣಾ ಕರ್ತವ್ಯದಿಂದ ವಿನಾಯ್ತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಜುಲೈ 31ರ ಗಡುವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ಸುಪ್ರೀಂ ಪೀಠ, ಕೇಂದ್ರ ಎನ್ ಆರ್ ಸಿ ಪ್ರಕ್ರಿಯೆಗೆ ಸಹಕಾರ ನೀಡುತ್ತಿಲ್ಲ ಮತ್ತು ಗೃಹ ಸಚಿವಾಲಯ ಎನ್ ಆರ್ ಸಿ ಪ್ರಕ್ರಿಯೆ ಸಂಪೂರ್ಣ ಹಾಳು ಮಾಡಲು ಯತ್ನಿಸುತ್ತಿದೆ ಎಂದು ಕಿಡಿ ಕಾರಿದೆ.
ಕಳೆದ ಜನವರಿ 24ರಂದು ಎನ್ ಆರ್ ಸಿ ಅಂತಿಮ ವರದಿ ಸಿದ್ಧಪಡಿಸಲು ಜುಲೈ 31ರ ಗಡುವು ನೀಡಿದ್ದು, ಇದು ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಬಾರದು ಎಂದು ಕೋರ್ಟ್ ಎಚ್ಚರಿಸಿತ್ತು.