ಮಾದಕ ವಸ್ತುಗಳು ಇಂದಿನ ಯುವಜನಾಂಗಕ್ಕೆ ಮಾರಕ- ಭಾರತಿ ಜೆ ಶೆಟ್ಟಿ
0
ಫೆಬ್ರವರಿ 08, 2019
ಉಪ್ಪಳ: ಮಾದಕ ವಸ್ತುಗಳು ಇಂದಿನ ಯುವಜನಾಂಗಕ್ಕೆ ಮಾರಕ. ಇದರ ವಿರುದ್ಧ ಜನಜಾಗೃತಿ ಅನಿವಾರ್ಯ. ಈ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ಕಾರ್ಯಕ್ರಮ ಅಭಿನಂದನಾರ್ಹ ಎಂದು ಪೈವಳಿಕೆ ಗ್ರಾಮಪಂಚಾಯತಿ ಅಧ್ಯಕ್ಷೆ ಭಾರತಿ ಜೆ ಶೆಟ್ಟಿ ನುಡಿದರು.
ಕೇರಳ ರಾಜ್ಯ ಅಬಕಾರಿ ಇಲಾಖೆ ಮತ್ತು ಪೈವಳಿಕೆ ಗ್ರಾಮ ಪಂಚಾಯತಿ ಆಶ್ರಯದಲ್ಲಿ ಪೈವಳಿಕೆ ಗ್ರಾಮ ಪಂಚಾಯತಿ ಮಟ್ಟದ ಮಾದಕ ದ್ರವ್ಯ ವ್ಯಸನ ವಿರುದ್ಧ ಜಾಗೃತಿ ಕಾರ್ಯಕ್ರಮಯಾದ "ವಿಮುಕ್ತಿ" ಯನ್ನು ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಪಾವಲುಕೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ಶ್ಯಾಮಲ ಪಿ, ಪ್ರಾಂಶುಪಾಲ ವಿಶ್ವನಾಥ ಕುಂಬಳೆ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಮೇಶ್ ಪೈವಳಿಕೆ, ರಾಧಾಕೃಷ್ಣ ಮಾಸ್ತರ್, ರೋಹಿಣಿ, ಅಬ್ದುಲ್ ರಹಿಮಾನ್ ಪೈವಳಿಕೆ, ಮಜೀದ್ ದೇವಕಾನ ಉಪಸ್ಥಿತರಿದ್ದರು.
ಶಾಲಾ ನೌಕರರ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಎಂ ಎಸ್ ಕಾರ್ಯಕ್ರಮ ನಡೆಸಿಕೊಟ್ಟರು. ಪೈವಳಿಕೆನಗರ ಪೇಟೆಯಲ್ಲಿ ಮಾದಕ ದ್ರವ್ಯದ ಕುರಿತು ಜಾಗೃತಿ ಮೂಡಿಸುವ ಮೆರವಣಿಗೆ ನಡೆಸಲಾಯಿತು. ಪೈವಳಿಕೆ ಗ್ರಾಮ ಪಂಚಾಯತಿ ಮಟ್ಟದ ಹಿರಿಯ ಪ್ರಾಥಮಿಕ, ಹೈಸ್ಕೂಲ್, ಹಯರ್ ಸೆಕೆಂಡರಿ ಶಾಲೆಗಳ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ಜಯಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.