ವೀಣಾವಾದಿನಿ ಸಂಗೀತ ವಿದ್ಯಾಪೀಠದ ವಾರ್ಷಿಕೋತ್ಸವ
ಬದಿಯಡ್ಕ: ವೇದ ಹಾಗೂ ಸಂಗೀತಗಳು ಭಗವಂತನ ನಾಮ ಸ್ಮರಣೆಯ ಎರಡು ಪ್ರಧಾನ ಅಂಗವಾಗಿ ಬದುಕಿನ ಅರ್ಥವನ್ನು ವ್ಯಾಪಕಗೊಳಿಸುತ್ತದೆ. ಕರ್ಮವು ಬ್ರಹ್ಮ ಸ್ವರೂಪವಾಗಿದ್ದು, ಸಂಗೀತಾರಾಧನೆಯ ಮೂಲಕ ಭಗವಂತನ ಸಾಮೀಪ್ಯವನ್ನು ಪಡೆಯಬಹುದು ಎಂದು ಹಿರಿಯ ವೈದಿಕ ವಿದ್ವಾಂಸ ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ ಅವರು ತಿಳಿಸಿದರು.
ಬಳ್ಳಪದವಿನಲ್ಲಿರುವ ನಾರಾಯಣೀಯಮ್ ವೀಣಾವಾದಿನಿ ಸಂಗೀತ ವಿದ್ಯಾಪೀಠದ ವಾರ್ಷಿಕೋತ್ಸವ "ವೇದ ನಾದ ಯೋಗ ತರಂಗಿಣ" ಮೂರು ದಿನಗಳ ವೇದ-ನಾದ-ಯೋಗ ಅನುಸಂಧಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೃಷ್ಟಿಯ ಮೂಲ ಸ್ವರೂಪವಾದ ನಾದ ವಾತಾವರಣದಲ್ಲಿ ವಿಶಿಷ್ಟವಾದ ತರಂಗಾಂತರಗಳ ಸೃಜಿಸುವಿಕೆಯ ಮೂಲಕ ಭೂಗೋಲದ ಮೇಲೆ ತನ್ನದೇ ಪ್ರಭಾವ ಬೀರಿದೆ. ಸಪ್ತ ಸ್ವರಗಳ ಮೂಲದ ಸಂಗೀತದಿಂದ ಹೊರಹೊಮ್ಮುವ ಧನಾತ್ಮಕ ತರಂಗಾಂತರಗಳು ಸಗುಣ ಶಕ್ತಿಗಳ ಮೂಲಕ ಲೋಕೋದ್ದಾರಕ್ಕೆ ಕಾರಣವಾಗಿದೆ ಎಂಬುದನ್ನು ಆಧುನಿಕ ವಿಜ್ಞಾನವೂ ಒಪ್ಪಿಕೊಂಡಿದೆ. ಈ ನಿಟ್ಟಿನಲ್ಲಿ ವೀಣಾವಾದಿನಿ ನಡೆಸುತ್ತಿರುವ ಸಂಶೋಧನೆಗಳು ಸಕಲ ಸನ್ಮಂಗಳಗಳಿಗೆ ಕಾರಣವಾಗಲಿ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಸಂಗೀತ ಕಲಾಚಾರ್ಯ ಪ್ರೊ.ವೆಂಕಟರಮಣನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಗೀತದ ಧ್ವನಿ ಕಂಪನಾಂಕಗಳಿರುವಲ್ಲಿ ಭಕ್ತಿ, ದೇವರುಗಳ ಸಾನ್ನಿಧ್ಯ ಇರುತ್ತದೆ. ವಿದ್ಯಾಧಿದೇವತೆ ಸರಸ್ವತಿಯ ಅನುಗ್ರಹ ಲೀಲೆಗಳಿಂದ ಸಾಧನೆಗೊಳ್ಳುವ ಸಂಗೀತ ಕಲಾರಾಧನೆ ಪ್ರತಿಯೊಂದರ ಮಧುರ ಬದುಕಿಗೆ ನೆಲೆ ಒದಗಿಸುತ್ತಿದೆ ಎಂದು ತಿಳಿಸಿದರು. ಕಾಸರಗೋಡಿನಲ್ಲಿ ಅತ್ಯಪೂರ್ವವಾಗಿ ಮೂಡಿಬರುತ್ತಿರುವ ವೀಣಾವಾದಿನಿ ಮಹತ್ವಪೂರ್ಣ ಕಲಾಶಾಲೆಯಾಗಿದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ ಅವರು ಮಾತನಾಡಿ, ದೇವ ಹಿತಂ ಯದಾಯು: ಎಂಬ ಪರಿಕಲ್ಪನೆಯಡಿ ಭಾರತೀಯ ಪರಂಪರೆ, ಆಚರಣೆಗಳು ಮೂಡಿಬಂದಿದೆ. ಪುರುಷಾರ್ಥಗಳ ಸಾಧನೆಗೆ ಪೂಜೆ, ಆರಾಧನೆಗಳನ್ನು ಮಾಡಲಾಗುತ್ತದೆ. ಕಾಮನೆಗಳಿಂದ ಮುಕ್ತರಾಗಿ ಆನಂದ, ಸಂತೃಪ್ತಿಗಳ ಪ್ರಾಪ್ತಿಗೆ ಶ್ರೀಚಕ್ರ ಆರಾಧನೆ ಸಂಗೀತೋಪಾಸನೆಯ ಜೊತೆಗೆ ಮುನ್ನಡೆಸುವುದರಿಂದ ಜೀವ ಹಿತದ ಜೊತೆಗೆ ಸಕಲ ಚರಾಚರಗಳ ಹಿತವೂ ಅಡಗಿದೆ ಎಂದು ತಿಳಿಸಿದರು.
ಮಂಗಳೂರು ಬಾನುಲಿ ನಿಲಯದ ನಿವೃತ್ತ ನಿರ್ದೇಶಕ, ಸಾಹಿತಿ ಡಾ.ವಸಂತಕುಮಾರ್ ಪೆರ್ಲ ಅವರು ಉಪಸ್ಥಿತರಿದ್ದು ಮಾತನಾಡಿ, ವೇದದ ಉಪಾಂಗವಾಗಿ ಬೆಳೆದು ಬಂದಿರುವುದರಲ್ಲಿ ಸಂಗೀತ ಮಹತ್ವಪೂರ್ಣವಾಗಿ ದೇವಾರ್ಚನೆಯಾಗಿ ಹೆಸರು ಪಡೆದಿದೆ. ಕಾಮನೆಗಳಿಲ್ಲದ ಸಂಗೀತ ಕಲಾಸೇವೆಯ ಮೂಲಕ ಸಾಧನೆ ನಡೆಸುತ್ತಿರುವ ವೀಣಾವಾದಿನಿಯು ಸಂಕಷ್ಟಗಳ ಮಧ್ಯೆಯೂ ಪ್ರಯತ್ನಶೀಲತೆಯ ಮೂಲಕ ಗೆಲುವಿನ ಪಂಚ ಅಂಗಗಳನ್ನು ಏರುತ್ತಿದೆ ಎಂದು ತಿಳಿಸಿದರು.
ವೈದಿಕ ಆಚಾರ್ಯ ಬ್ರಹ್ಮಶ್ರೀ ಕನ್ಯಾಕುಮಾರಿ ಕೃಷ್ಣನ್, ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ ಮುಂದಾಳು ರಾಜಾರಾಮ್ ಪೆರ್ಲ, ಸವಿತಾ ಕಲ್ಲಡ್ಕ ಉಪಸ್ಥಿತರಿದ್ದು ಶುಭಹಾರೈಸಿದರು.
ವೀಣಾವಾದಿನಿಯ ನಿರ್ದೇಶಕ ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಅಯನಾ ಪೆರ್ಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಳಿಕ ಮಹಾ ಶ್ರೀಚಕ್ರ ನವಾವರಣ ಪೂಜೆ, ನವಾವರಣ ಕೃತಿಗಳ ಪ್ರಸ್ತುತಿ ಮತ್ತು ಮಹಾ ಮಂಗಳಾರತಿಗಳು ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿಯವರ ಆಚಾರ್ಯತ್ವದಲ್ಲಿ ನಡೆಯಿತು. ಬಳಿಕ ಅಪರಾಹ್ನ ನವಾವರಣ ಕೃತಿಗಳ ಆಲಾಪನೆಯು ಪ್ರೊ.ಕೆ.ವೆಂಕಟರಮಣನ್ ಹಾಗೂ ವೀಣಾವಾದಿನಿಯ ವಿದ್ಯಾರ್ಥಿಗಳಿಂದ ಪ್ರಸ್ತುತಿಗೊಂಡಿತು. ಸಂಜೆ ನವಾವರಣ ಪೂಜೆಯ ಬಳಿಕ ಮಹಾಮಂಗಳಾರತಿ ನಡೆಯಿತು.
ಇಂದಿನ ಕಾರ್ಯಕ್ರಮ:
ಫೆ 2 ರಂದು ಬೆಳಿಗ್ಗೆ 9 ರಿಂದ ಪ್ರೊ.ಕೆ.ವೆಂಕಟರಮಣನ್ ಹಾಗೂ ವೀಣಾವಾದಿನಿಯ ವಿದ್ಯಾರ್ಥಿಗಳಿಂದ ನವಗ್ರಹ ಕೃತಿಗಳ ಪ್ರಸ್ತುತಿ ಮತ್ತು 10.30 ರಿಂದ ವೀಣಾವಾದಿನಿ ವಿದ್ಯಾರ್ಥಿಗಳಿಂದ ನಾದೋಪಾಸನೆ ಹೆಸರಿನಲ್ಲಿ ಸಂಗೀತ ಕಚೇರಿಗಳು ಜರಗುವವು. ಮಂಗಳೂರಿನ ಕಿರಿಯ ಕಲಾವಿದ ಆಗಮ ಪೆರ್ಲ, ಕುಮಾರಿ ಶ್ರೇಯಾ, ಧನ್ವೀಪ್ರಸಾದ, ಕುಮಾರಿ ವಿಧಾತ್ರಿ ಭಟ್ ಅಬರಾಜೆ, ವಿದುಷಿ ಸ್ವರ್ಣಗೌರಿ ಕೇದಾರ ಮೊದಲಾದವರು ಕಚೇರಿ ನಡೆಸುವರು. ಅನಂತರ ತಿರುವಿಳ ವಿಜು ಎಸ್. ಆನಂದ್ ಮತ್ತು ಮಾಂಜೂರು ರೆಂಜಿತ್ ಅವರಿಂದ ದ್ವಂದ್ವ ವಯೊಲಿನ್ ವಾದನ ಆಯೋಜಿಸಲಾಗಿದೆ. ವೈಕ್ಕಂ ಪ್ರಸಾದ್(ಮೃದಂಗ), ಮಂಜೂರ್ ರಂಜಿತ್(ಘಟಂ)ನಲ್ಲಿ ಸಹಕರಿಸುವರು.
ನಾಳೆಯ ಕಾರ್ಯಕ್ರಮ:
ಫೆ. 3 ರಂದು ಬೆಳಿಗ್ಗೆ 6.30 ಕ್ಕೆ ಈಶಾ ಫೌಂಡೇಶನ್ ನ ಉಪ ಯೋಗ ಕಾರ್ಯಕ್ರಮ, 9 ರಿಂದ ಪಂಚರತ್ನ ಕೃತಿಗಳ ಗಾಯನ ಮತ್ತು ವೀಣಾವಾದಿನಿ ವಿದ್ಯಾರ್ಥಿಗಳಿಂದ ನಾದೋಪಾಸನೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ ವಿದ್ವಾನ್ ಟಿ. ಜಿ. ಗೋಪಾಲ ಕೃಷ್ಣನ್ ಮತ್ತು ವಿದುಷಿ ಉಷಾ ಈಶ್ವರ ಭಟ್ ಅವರಿಗೆ ವೀಣಾವಾದಿನಿ ಪುರಸ್ಕಾರ ಪ್ರದಾನ ಮತ್ತು ಸಮಾಜ ಸೇವಕ ಸಾಯಿರಾಮ್ ಗೋಪಾಲಕೃಷ್ಣ ಭಟ್ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೆಹಲಿಯಲ್ಲಿರುವ ಕೇಂದ್ರೀಯ ಸಾಮಾಜಿಕ ನ್ಯಾಯ ಮಂಡಳಿಯ ಸದಸ್ಯ ಎಂ. ರಾಜೀವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರಾಮ ಭಟ್ ಸಜಂಗದ್ದೆ ಮತ್ತು ಬಳ್ಳಪದವು ರಾಧಾಕೃಷ್ಣ ಭಟ್ ಉಪಸ್ಥಿತರಿರುವರು.
ಸಂಜೆ 6 ಗಂಟೆಗೆ ಪ್ರಸಿದ್ಧ ಕಲಾವಿದ ಚೆನ್ನೈಯ ಸಂದೀಪ್ ನಾರಾಯಣ ಅವರ ಸಂಗೀತ ಕಚೇರಿ ಜರಗಲಿದೆ.