ಆರಿಕ್ಕಾಡಿ : ಪುನರ್ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ
0
ಫೆಬ್ರವರಿ 08, 2019
ಕುಂಬಳೆ: ಆರಿಕ್ಕಾಡಿ ಹನುಮಾನ್ ನಗರದ ಇತಿಹಾಸ ಪ್ರಸಿದ್ಧವಾದ ಶ್ರೀ ಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರ ಮಾರ್ಗದರ್ಶನದಲ್ಲಿ ಎ.22 ರಿಂದ 26 ರ ವರೆಗೆ ನಡೆಯಲಿದೆ.
ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ವೀರಾಂಜನೇಯ ದೇವಸ್ಥಾನದ ಸಭಾ ಮಂಟಪದಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಕುಂಬಳೆ ಸುಧಾಕರ ಅವರ ಅಧ್ಯಕ್ಷತೆಯಲ್ಲಿ ಪುನರ್‍ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿಯ ವಿಶೇಷ ಸಮಾಲೋಚನಾ ಸಭೆಯು ಜರಗಿತು.
ಅಖಿಲ ಭಾರತ ಮಟ್ಟದ ರಾಮಕ್ಷತ್ರಿಯ ಸಮಾಜದ ಸಮಾವೇಶ : ಎ.22 ರಂದು ಒಂದು ದಿನದ ಕಾರ್ಯಕ್ರಮದ ಪ್ರಯುಕ್ತ ಕೋಟೆಯಾರ್, ರಾಮರಾಜ ಕ್ಷತ್ರಿಯ, ರಾಮಕ್ಷತ್ರಿಯ ಸಮಾಜದ ಅಖಿಲ ಭಾರತ ಮಟ್ಟದ ರಾಮಕ್ಷತ್ರಿಯ ಸಮಾಜದ ಸಮಾವೇಶವೊಂದನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಕೇರಳ, ಕರ್ನಾಟಕ, ಮಹಾರಾಷ್ಟ್ರ ಹಾಗು ದೇಶ, ವಿದೇಶಗಳಲ್ಲಿರುವ ರಾಮಕ್ಷತ್ರಿಯ ಸಮಾಜ ಸೇವಾ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾ„ಕಾರಿಗಳನ್ನು ಈ ಬೃಹತ್ ಸಮಾವೇಶಕ್ಕೆ ಆಮಂತ್ರಿಸಲಾಗಿದೆ. ರಾಮಕ್ಷತ್ರಿಯ ಸಮಾಜದ ಸುಮಾರು 200 ಸಮಾಜ ಸೇವಾ ಸಂಘಗಳು, ಕುಟುಂಬ ದೇವಸ್ಥಾನ, ಕುಲದೇವರ ಮನೆಗಳ ಪ್ರತಿನಿಧಿಗಳು ಸಕ್ರಿಯವಾಗಿ ಈ ಸಮಾವೇಶದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ,
ರಾಮಕ್ಷತ್ರಿಯ ಸಮಾಜದ ಸೇವಾ ಸಂಘಗಳು ಈ ಸಮಾವೇಶದ ಮಾಹಿತಿಯನ್ನು ತಮ್ಮ ವಾಟ್ಸಪ್‍ಗಳ ಮೂಲಕ ಇತರ ಸಂಘಗಳ ಪದಾಧಿಕಾರಿಗಳಿಗೆ ತಿಳಿಸಬೇಕಾಗಿ ವಿನಂತಿಸಲಾಗಿದೆ.
ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪುನರ್ ನವೀಕರಣ ಕಾರ್ಯವು ಭರದಿಂದ ನಡೆಯುತ್ತಿದೆ. ದೇವಸ್ತಾನದ ಗರ್ಭಗುಡಿಗೆ ತಾಮ್ರದ ಹೊದಿಕೆಯೊಂದಿಗೆ ಭವ್ಯವಾಗುವಂತೆ ನಿರ್ಮಿಸಲಾಗುತ್ತಿದೆ. ಇದರ ಪುನರ್ ನವೀಕರಣ ಕಾರ್ಯಕ್ಕೆ ನಿತ್ಯವೂ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ದುಡಿಯುತ್ತಿದ್ದಾರೆ.
ಎ.22 ರಿಂದ 26 ರ ವರೆಗೆ ಐದು ದಿನಗಳ ಕಾಲ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುವ ಭಕ್ತಾದಿಗಳಿಗೆ ಅನ್ನಪ್ರಸಾದ ಭೋಜನವು ನಡೆಯಲಿದೆ. ಈ ಬೃಹತ್ ಯೋಜನೆಯ ಅನುಷ್ಠಾನಕ್ಕಾಗಿ ಶ್ರೀ ಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿಯನ್ನು ರೂಪೀಕರಿಸಲಾಯಿತು.
ಗೌರವಾಧ್ಯಕ್ಷರಾಗಿ ಕೆ.ಎರ್.ಲಕ್ಷ್ಮೀಪತಿ ರಾವ್ ಮಾಡೂರು, ಅಧ್ಯಕ್ಷರಾಗಿ ಕುಂಬಳೆ ಸುಧಾಕರ ಕುಲಶೇಖರ, ಕಾರ್ಯಾಧ್ಯಕ್ಷರಾಗಿ ಕೆ.ರಮಾಕಾಂತ ಕುಂಬಳೆ ಪಠೇಲರಮನೆ, ಕಾರ್ಯದರ್ಶಿಯಾಗಿ ಲಿಂಗಪ್ಪಯ್ಯ ಜಾಲುಮನೆ ಕುಂಬಳೆ, ಸಂಘಟನಾ ಕಾರ್ಯದರ್ಶಿಯಾಗಿ ಶಿವರಾಮ ಕಾಸರಗೋಡು, ಕೋಶಾಧಿಕಾರಿಯಾಗಿ ಕೆ.ದಿನಕರ ಪೈವಳಿಕೆ ಮಂಗಳೂರು ಹಾಗು ಉಪಾಧ್ಯಕ್ಷರು, ಜತೆ ಕಾರ್ಯದರ್ಶಿಗಳು ಮತ್ತು ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.
ಮುಂದಿನ ವಿಶೇಷ ಮಹಾಸಭೆಯನ್ನು ಫೆ.17 ರಂದು ಬೆಳಗ್ಗೆ 10 ಕ್ಕೆ ಶ್ರೀ ಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದ ಸಭಾ ಮಂಟಪದಲ್ಲಿ ಜರಗಲಿದೆ. ಬ್ರಹ್ಮಕಲಶೋತ್ಸವ ಸಮಿತಿ, ಸೇವಾ ಸಮಿತಿ ಹಾಗು ರಾಮರಾಜ ಕ್ಷತ್ರಿಯ, ರಾಮಕ್ಷತ್ರಿಯ ಸಮಾಜ ಸೇವಾ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು, ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ವಿನಂತಿಸಲಾಗಿದೆ.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ರಮಾಕಾಂತ ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜ್ಯೋತಿಷ್ ಕೆ.ಕುಂಬಳೆ ಸ್ವಾಗತಿಸಿ, ಪಿ.ಮೌನೀಷ್ ಪುಜೂರು ವಂದಿಸಿದರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಸಲಹೆ ಸೂಚನೆ ನೀಡಿದರು. ಗೌರವಾಧ್ಯಕ್ಷ ಕೆ.ಎಸ್.ಲಕ್ಷ್ಮೀಪತಿ ರಾವ್ ಮಾರ್ಗದರ್ಶನ ನೀಡಿದರು.