ಅಭಿನಂದನ್ ಸಿಂಗ್ ಸುರಕ್ಷಿತ ವಾಪಸಾತಿಗೆ ಇಡೀ ದೇಶದ ಪ್ರಾರ್ಥನೆ: ಪ್ರಧಾನಿ ವಿಡಿಯೋ ಸಂವಾದದಲ್ಲಿ ಬ್ಯುಸಿ; ಕಾಂಗ್ರೆಸ್
0
ಫೆಬ್ರವರಿ 28, 2019
ನವದೆಹಲಿ: ಭಾರತ-ಪಾಕ್ ನಡುವಿನ ಸಂಬಂಧ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದ್ದು, ಯುದ್ಧದ ಆತಂಕ ಮನೆ ಮಾಡಿದೆ. ಈ ಮಧ್ಯೆ ದೇಶದ ರಾಜಕೀಯ ವಲಯದಲ್ಲಿ ತೀವ್ರತರ ಚಟುವಟಿಕೆಗಳು ನಡೆಯುತ್ತಿದ್ದು, ಕ್ಷಿಷ್ಟಕರ ಪರಿಸ್ಥಿತಿ ಎದುರಿಸಲು ದೇಶ ಒಂದಾಗಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರ ಜೊತೆ ವಿಡಿಯೋ ಸಂವಾದ ನಡೆಸುತ್ತಿರುವುದು ವಿರೋಧ ಪಕ್ಷಗಳ ಕೆಂಗಣ್ಣಿಗೆ ತುತ್ತಾಗಿದೆ.
ದೇಶದ 132 ಕೋಟಿ ಜನತೆ ವಿಂಗ್ ಕಮಾಂಡರ್ ಅಭಿನಂದನ್ ಸಿಂಗ್ ಸುರಕ್ಷಿತವಾಗಿ ವಾಪಸ್ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ, ಆದರೆ ಮೋದಿ ಮಾತ್ರ ಚುನಾವಣೆಯಲ್ಲಿ ಮತ್ತೆ ಹೇಗೆ ಗೆಲ್ಲಬೇಕು ಎಂಬ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸರ್ಜೆವಾಲಾ ಟ್ವೀಟ್ ಮಾಡಿದ್ದಾರೆ.
ಭಾರತ- ಮತ್ತು ಪಾಕಿಸ್ತಾನ ಗಡಿಯಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ರದ್ದುಗೊಳಿಸಿತ್ತು, ಇಡೀ ದೇಶವೇ ಪುಲ್ವಾಮ ಉಗ್ರರ ದಾಳಿಯ ಬಗ್ಗೆ ತಲೆ ಕೆಡಿಸಿಕೊಂಡಿದ್ದರೇ, ಪ್ರಧಾನ ಸೇವಕರು ಮಾತ್ರ ವಿಡಿಯೋ ಸಂವಾದದಲ್ಲಿ ಬ್ಯುಸಿಯಾಗಿದ್ದಾರೆ, ಎಂದು ಆರೋಪಿಸಿದ್ದಾರೆ. ಯಾವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಗೊತ್ತಿಲ್ಲವೇ ಎಂದು ಕಿಡಿಕಾರಿದೆ.