ಉಪ್ಪಳ: ಸಮಗ್ರ ಶಿಕ್ಷಾ ಕೇರಳ ಇದರ ಭಾಗವಾಗಿ ಬ್ಲಾಕ್ ಸಂಪನ್ಮೂಲ ಕೇಂದ್ರ ನೇತೃತ್ವದಲ್ಲಿ ಮಂಜೇಶ್ವರದಲ್ಲಿ ಇತ್ತೀಚೆಗೆ ವಿವಿಧ ಶಾಲೆಗಳ ಶಾಲಾಭಿವೃದ್ದಿ ಸಮಿತಿ, ರಕ್ಷಕ ಶಿಕ್ಷಕ ಸಂಘ, ಮಾತೃಸಂಘ, ಶಾಲಾ ಆಡಳಿತ ಸಮಿತಿಗಳ ಅಧ್ಯಕ್ಷರುಗಳಿಗೆ ಒಂದು ದಿನದ ತರಬೇತಿಯು ಜರಗಿತು.
ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಂಜೇಶ್ವರ ಬ್ಲಾಕದ ಸಂಪನ್ಮೂಲ ಕೇಂದ್ರದ ಯೋಜನಾಧಿಕಾರಿ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಮ್ ಅಶ್ರಫ್ ಕಾರ್ಯಕ್ರಮ ಉದ್ಘಾಟಿಸಿದರು. ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದ ಮಕ್ಕಳು ಜೀವನವನ್ನು ಉತ್ತಮ ರೀತಿಯಲ್ಲಿ ಮುಂದುವರಿಸುವಲ್ಲಿ ಸಫಲರಾಗುತ್ತಾರೆ ಹಾಗೂ ಸಮಾಜದ ಜನರೊಂದಿಗೆ ಬೆರೆಯುವುದನ್ನು ಕಲಿಯುತ್ತಾರೆ ಎಂಬ ವಿಷಯವನ್ನು ಸ್ವ-ಅನುಭವದೊಂದಿಗೆ ಇತರರಿಗೆ ತಿಳಿಸಿಕೊಟ್ಟರು.
ವರ್ಕಾಡಿ ಗ್ರಾಮ ಪಂಚಾಯತಿ ಸದಸ್ಯ ಗೋಪಾಲಕೃಷ್ಣ ಪಜ್ವ ಶುಭಾಶಂಸನೆಗೈದರು. ಸುಮಾರು 80ರಷ್ಟು ಮಂದಿ ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಹಾಗೂ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ಶಿಬಿರಕ್ಕೆ ಭೇಟಿ ನೀಡಿ ಮಾಹಿತಿ ನೀಡಿದರು. ಬಿ.ಆರ್.ಸಿ ತರಬೇತುದಾರ ಗುರುಪ್ರಸಾದ್ ರೈ.ಕೆ ಹಾಗೂ ಆರ್.ಎಮ್.ಎಸ್.ಎ ತರಬೇತುದಾರ ಕೃಷ್ಣಪ್ರಕಾಶ್ ತರಬೇತುದಾರರಾಗಿ ಕಾರ್ಯಕ್ರಮ ನಡೆಸಿಕೊಟ್ಟರು.