ಶಬರಿಮಲೆಗೆ ಮಹಿಳೆಯರ ಪ್ರವೇಶ ತೀರ್ಪಿಗೆ ಬದ್ಧ: ಸುಪ್ರೀಂನಲ್ಲಿ ದೇವಸ್ವಂ ಮಂಡಳಿ ಯೂಟರ್ನ್
0
ಫೆಬ್ರವರಿ 07, 2019
ನವದೆಹಲಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಸುಪ್ರೀಂ ಕೋರ್ಟ್ ನಲ್ಲಿ ಯೂಟರ್ನ್ ಹೊಡೆದಿದ್ದು, ಕೋರ್ಟ್ ತೀರ್ಪಿಗೆ ತಾನು ಬದ್ಧ ಎಂದು ಬುಧವಾರ ಹೇಳಿದೆ.
ನಿನ್ನೆ ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಪ್ರವೇಶ ನೀಡಿದ್ದ ಸುಪ್ರೀಂ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರು ಪರಿಶೀಲನಾ ಅರ್ಜಿ ವಿಚಾರಣೆ ವೇಳೆ, ಮರುಪರಿಶೀಲನೆಯ ಅಗತ್ಯವಿಲ್ಲ ಎಂದು ಶಬರಿಮಲೆ ಅಯ್ಯಪ್ಪ ದೇಗುಲ ಆಡಳಿತ ಮಂಡಳಿ ಕೋರ್ಟ್ ತಿಳಿಸಿದೆ.
ಈ ಹಿಂದೆ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದ ಟಿಡಿಬಿ ಇದೀಗ ತನ್ನ ನಿರ್ಧಾರ ಬದಲಿಸಿದ್ದು, ಕಲಂ 25(1) ಪ್ರಕಾರ ಧಾರ್ಮಿಕ ಆಚರಣೆಯಲ್ಲಿ ಎಲ್ಲಾ ವ್ಯಕ್ತಿಗಳು ಸಮಾನರು ಎಂದು ಹೇಳಿರುವುದಾಗಿ ಟಿಡಿಬಿ ಪರ ವಕೀಲ ರಾಕೇಶ್ ದ್ವಿವೇದಿ ಅವರು ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ತಿಳಿಸಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ.
ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ವಾದವಾಗಿತ್ತು.