ಶಬರಿಮಲೆ ಮರು ಪರಿಶೀಲನಾ ಅರ್ಜಿ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
0
ಫೆಬ್ರವರಿ 06, 2019
ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50 ವರ್ಷದ ವಯೋಮಾನದ ಎಲ್ಲ ಮಹಿಳೆಯರಿಗೂ ಪ್ರವೇಶಕ್ಕೆ ಅನುಮತಿ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಬುಧವಾರ ತೀರ್ಪು ಕಾಯ್ದಿರಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಹಾಗೂ ನ್ಯಾಯಮೂರ್ತಿಗಳಾದ ರೋಹಿನ್ಟನ್ ಫಾಲಿ ನಾರಿಮನ್, ಡಿ.ವೈ.ಚಂದ್ರಚೂಡ್, ಎ.ಎಂ ಖಾನ್ವಿಲ್ಕರ್ ಮತ್ತು ಇಂದು ಮಲ್ಹೋತ್ರ್ರ ಅವರನ್ನೊಳಗೊಂಡ ಸಂವಿಧಾನ ಪೀಠ ಪುನರ್ ಪರಿಶೀಲನಾ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿದೆ.
ದೇವಾಲಯ ತಂತ್ರಿಗಳು ಹಾಗೂ ನಾಯರ್ ಸರ್ವಿಸ್ ಸೊಸೈಟಿ (ಎನ್‍ಎಸ್‍ಎಸ್) 54 ಮರು ಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ವಾದ, ಪ್ರತಿವಾದ ಆಲಿಸಿದ ಬಳಿಕ ಸಂವಿಧಾನ ಪೀಠ ತೀರ್ಪನ್ನು ಕಾಯ್ದಿರಿಸಿದೆ.
ಈ ಮಧ್ಯೆ ತಿರುವಾಂಕೂರು ದೇವಸ್ವಂ ಮಂಡಳಿ, ದೇವಾಲಯದೊಳಗೆ ಮಹಿಳೆಯರ ಪ್ರವೇಶಕ್ಕೆ ತನ್ನ ಆಕ್ಷೇಪವೇನೂ ಇಲ್ಲ ಎಂದು ಹೇಳಿದ್ದು, ಸುಪ್ರೀಂ ಕೋರ್ಟಿನ ತೀರ್ಪನ್ನು ಜನತೆ ಗೌರವಿಸಬೇಕು ಎಂದಿದೆ.