ಬಲಪಂಥೀಯ ವಿರೋಧಿ ಧೋರಣೆ: ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದ ಟ್ವಿಟ್ಟರ್ ಇಂಡಿಯಾ
0
ಫೆಬ್ರವರಿ 06, 2019
ನವದೆಹಲಿ: ಪ್ರಮುಖ ಸಾಮಾಜಿಕ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ಟ್ವಿಟ್ಟರ್ ಬಲ ಪಂಥೀಯರ ಖಾತೆಗಳ ಬಗ್ಗೆ ನಕಾರಾತ್ಮಕ ಧೋರಣೆ ಹೊಂದಿದೆ ಎಂದು ಆರೋಪಿಸಿ ಸಂಸದೀಯ ಸಮಿತಿ ಸಮನ್ಸ್ ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಟ್ವಿಟ್ಟರ್ ಇಂಡಿಯಾ, ಈ ಸಂಬಂಧ ಭಾರತ ಸರ್ಕಾರದೊಂದಿಗೆ ಸಂಪರ್ಕದಲ್ಲಿರುವುದಾಗಿ ಬುಧವಾರ ಹೇಳಿದೆ.
ಬಲಪಂಥೀಯ ವಿರೋಧಿ ಧೋರಣೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ. ಮಾತುಕತೆ ಮುಗಿದ ನಂತರ ಹೆಚ್ಚಿನ ಮಾಹಿತಿ ನೀಡುವುದಾಗಿ ಟ್ವಿಟ್ಟರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ನಿನ್ನೆಯಷ್ಟೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ನೇತೃತ್ವದ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿ ಟ್ವಿಟ್ಟರ್ ಗೆ ಸಮನ್ಸ್ ಜಾರಿಮಾಡಿದ್ದು, ಫೆಬ್ರವರಿ 11ಕ್ಕೆ ನಿಗದಿಯಾಗಿರುವ ಸಭೆಯಲ್ಲಿ ಭಾಗಿಯಾಗುವಂತೆ ಸೂಚಿಸಲಾಗಿದೆ. ಅಲ್ಲದೆ
ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿಗಳು ಸಹ ಭಾಗವಹಿಸಬೇಕೆಂದು ಈ ವೇಳೆ ಸೂಚಿಸಲಾಗಿದೆ.
ಮುಂದಿನ ವಾರ ನಡೆಯಲಿರುವ ಸಭೆಯ ಕಾರ್ಯಸೂಚಿಯನ್ನು ಠಾಕೂರ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಟ್ವಿಟ್ಟರ್ ಸಂಸ್ಥೆಯ ಪ್ರತಿನಿಧಿಗಳು ಸಹ ಸಭೆಗೆ ಹಾಜರಾಗಬೇಕೆಂದು ಕರೆ ನೀಡಲಾಗಿದೆ ಎಂದೂ ಅವರು ಹೇಳಿದ್ದಾರೆ.