ಮುಳ್ಳೇರಿಯ: ಹಿಂದುಗಳಷ್ಟು ಪ್ರೀತಿ, ಸ್ನೇಹವನ್ನು ನೀಡುವವರು ಬೇರೆಲ್ಲೂ ಸಿಗಲಾರರು. ಕಳೆದ 16 ವರ್ಷಗಳಿಂದ ಹಿಂದೂ ಕುಟುಂಬಗಳ ಜೊತೆಯಲ್ಲಿ ಅತೀ ಸಂತೋಷದಿಂದ ಜೀವನ ನಡೆಸುತ್ತಿದ್ದೇನೆ ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಇಬ್ರಾಹಿಂ ಯನ್. (ಉಂಬು) ಹೇಳಿದರು.
ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶುಕ್ರವಾರ ರಾತ್ರಿ ನಡೆದ ಶಿವಗಿರಿ ಫ್ರೆಂಡ್ಸ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್, ನಾರಂಪಾಡಿ ಇದರ 15ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶಬರಿಮಲೆಯಲ್ಲಿ ನಡೆಸಿದ ಉತ್ತಮ ಸೇವೆಗಾಗಿ ಗೌರವಾರ್ಪಣೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಶಬರಿಮಲೆ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹಿಂದುಗಳ ಮನಸ್ಸಿಗೆ ಘಾಸಿಯನ್ನುಂಟುಮಾಡಿದೆ. ನಿಮ್ಮೊಂದಿಗೆ ನಾನೂ ಇದ್ದೇನೆ. ಶಬರಿಮಲೆಗೆ ಆಗಮಿಸುವ ಅದೆಷ್ಟೋ ಜನರಿಗೆ ಸಹಾಯಮಾಡುವ ಭಾಗ್ಯ ನನಗೆ ಲಭಿಸಿದೆ. ಜಾತಿ ಮತದ ಹೆಸರಿನಲ್ಲಿ ಯಾರೂ ಸಂಘರ್ಷವನ್ನುಂಟುಮಾಡದೆ ಬಾಳುವಂತಾಗಲು ದೇವರು ನಮ್ಮೆಲ್ಲರನ್ನು ಅನುಗ್ರಹಿಸಲಿ ಎಂದು ಅವರು ತಿಳಿಸಿದರು.
ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಯಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ ದೀಪಬೆಳಗಿಸಿ ಉದ್ಘಾಟಿಸಿದರು. ಶಿವಗಿರಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸತ್ಯಗೋಪಾಲ ನಾರಂಪಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಉಮಾಮಹೇಶ್ವರ ಸೇವಾಸಮತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ, ಭಜನಾ ಸಮಿತಿಯ ಅಧ್ಯಕ್ಷ ಪದ್ಮನಾಭ ಮಣಿಯಾಣಿ, ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಅಧ್ಯಕ್ಷ ರಾಧಾಕೃಷ್ಣ ನಾಯರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ರಾಷ್ಟಮಟ್ಟದ ಚೆಸ್ ಚಾಂಪ್ಯನ್ ಗಗನ್ ಭಾರದ್ವಾಜ್ ಮತ್ತು ಗಾನಸಮೃದ್ಧಿ ಕಾನಕಜೆ ಇವರನ್ನು ಕ್ಲಬ್‍ನ ವತಿಯಿಂದ ಸನ್ಮಾನಿಸಲಾಯಿತು. ರಮೇಶ್ ಕುರುಮುಜ್ಜಿ ಪ್ರಾರ್ಥಿಸಿದರು. ಗೋಪಾಲಕೃಷ್ಣ ಮುಂಡೋಳುಮೂಲೆ ಸ್ವಾಗತಿಸಿ, ಪ್ರಮೋದ್ ವಂದಿಸಿದರು.
ನಂತರ ಪ್ರತೀವರ್ಷದಂತೆ 15ನೇ ವರ್ಷವೂ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಜಾತ್ರೋತ್ಸವದ ಸಂದರ್ಭದಲ್ಲಿ ಸಮರ್ಪಿಸುವಂತೆ ಆಕರ್ಷಕ ಮೆರವಣಿಗೆಯಲ್ಲಿ ಪಾತ್ರೆಗಳನ್ನು ಸಮರ್ಪಿಸಲಾಯಿತು. ಸ್ಯಾಕ್ಸೋಫೋನ್ ವಾದನ, ಸಿಂಗಾರಿಮೇಳ, ಮುತ್ತುಕೊಡೆಗಳೊಂದಿಗೆ ಭಕ್ತಾದಿಗಳು ಪಾಲ್ಗೊಂಡಿದ್ದರು.
ಇಬ್ರಾಹಿಂ(ಉಂಬು) ಅವರ ಬಗ್ಗೆ:
ಶಬರಿಮಲೆ ನೀಲಕ್ಕಲ್ಲಿನಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಾಹಿತಿ ಕೇಂದ್ರದಲ್ಲಿ 7 ಭಾಷೆಗಳಲ್ಲಿ ವ್ಯವಹರಿಸುವ ಇಬ್ರಾಹಿಂ (ಉಂಬು) ಅವರು ಮಾಹಿತಿಗಾರರಾಗಿ ಕರ್ತವ್ಯದಲ್ಲಿದ್ದಾರೆ. ವಿವಿಧ ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳಿಗೆ ಮನದಟ್ಟಾಗುವ ರೀತಿಯಲ್ಲಿ ಮಾಹಿತಿಯನ್ನು ನೀಡುತ್ತಿದ್ದಾರೆ. ಮಕ್ಕಳು, ವೃದ್ಧರು, ವಿಕಲಚೇತನರ ಕುರಿತು ಅವರು ವಿಶೇಷ ಕಾಳಜಿಯನ್ನು ವಹಿಸಿ ಗಮನ ಸೆಳೆದಿದ್ದಾರೆ. ಜಿಲ್ಲೆಯ ನಾರಂಪಾಡಿಯಲ್ಲಿ ಹುಟ್ಟಿ ಬೆಳೆದು, ಪ್ರಸ್ತುತ ಸೂರಂಬೈಲಿನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.
ಇಬ್ರಾಹಿಂ ಅವರ ಸೇವೆಗೆ ಅಭಿಪ್ರಾಯ:
ನಮ್ಮೂರಿನ ಯುವಕನೋರ್ವ ಶಬರಿಮಲೆಗೆ ಆಗಮಿಸುವ ಭಕ್ತಾದಿಗಳಿಗೆ ಸೂಕ್ತ ಮಾಹಿತಿಯನ್ನು ನೀಡುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರವಾಗಿದ್ದು ಇಬ್ರಾಹಿಂ ಅವರು ನಿಜವಾಗಿಯೂ ಅಭಿನಂದನಾರ್ಹರು. ಈ ನಿಟ್ಟಿನಲ್ಲಿ ಅವರನ್ನು ಗುರುತಿಸಿ ಶಿವಗಿರಿ ಫ್ರೆಂಡ್ಸ್ ಕ್ಲಬ್ ಮಾದರಿಯಾಗಿದೆ.
- ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ.
ಕುಂಬ್ಡಾಜೆ ಸೇವಾಸಹಕಾರಿ ಬ್ಯಾಂಕ್ ಅಧ್ಯಕ್ಷ, ಸಾಮಾಜಿಕ ಮುಖಂಡ.