ಮಹಿಳೆಯರ ಸ್ವಯಂ ಸಂರಕ್ಷಣೆಗೆ ಪೊಲೀಸರ ತರಬೇತಿಯ ಸಾಥ್
0
ಫೆಬ್ರವರಿ 25, 2019
ಕಾಸರಗೋಡು: ಮಹಿಳೆಯರಿಗೆ ಸ್ವಯಂರಕ್ಷಣೆಗಾಗಿ ದೈಹಿಕ ಕದನಕಲೆಗಳನ್ನು ನೀಡುವ ಮೂಲಕ ರಾಜ್ಯದ ಪೊಲೀಸ್ಇಲಾಖೆ ಗಮನಸೆಳೆಯುತ್ತಿದೆ.
ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಸರಣಿ ಕಾರ್ಯಕ್ರಮಗಳ ಅಂಗವಾಗಿ ಈ ನಿಯುದ್ಧ ಕಲೆಗಳ ತರಬೇತಿ ನಡೆಸಲಾಗುತ್ತಿದೆ.
ಕಾಞಂಗಾಡ್ ಅಲಾಮಿಪಳ್ಳಿ ಬಸ್ ನಿಲ್ದಾಣ ಆವರಣದಲ್ಲಿ ಪ್ರತ್ಯೇಕವಾಗಿ ತಯಾರಿಸಲಾದ ಸಭಾಂಗಣದಲ್ಲಿ ಮಹಿಳೆಯರಿಗೆ ಶಾರೀರಿಕ ಯುದ್ಧ ಕಲೆ ಪೊಲೀಸ್ ಇಲಾಖೆ ವತಿಯಿಂದ ಕಲಿಸಲಾಗುತ್ತಿದೆ. ಅರ್ಧ ತಾಸಿನ ಈ ತರಬೇತಿಯಲ್ಲಿ ಸ್ವಯಂ ರಕ್ಷಣೆಗೆ ಮಹಿಳೆಯರು ಬಳಸಬಹುದಾದ ಕಸರತ್ತುಗಳನ್ನು ತಿಳಿಸಿಕೊಡಲಾಗುತ್ತಿದೆ. ಪೊಲೀಸ್ ಮಹಿಳಾ ಘಟಕದ ಸಿಬ್ಬಂದಿಯಾಗಿರುವ ಪ್ರಸೀದಾ, ನೀಲೇಶ್ವರ ಠಾಣೆಯ ಸಿಬ್ಬಂದಿ ಪಿ.ಆದಿರ, ರಾಜಪುರಂ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಸಿ.ಸಿ.ಸುಜಾತಾ ತರಬೇತಿಗೆ ನೇತೃತ್ವ ನೀಡುತ್ತಿದ್ದಾರೆ.
2015ರಿಂದ ಕೇರಳಪೊಲೀಸ್ ಇಲಾಖೆ ನೇತೃತ್ವದಲ್ಲಿ ಮಹಿಳೆಯರಿಗಾಗಿ ಸ್ವಯಂರಕ್ಷಣೆ ಸಂಬಂಧ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮಾತ್ರ 50 ಸಾವಿರಕ್ಕೂ ಅಧಿಕ ಮಂದಿಗೆ ಈಗಾಗಲೇ ತರಬೇತಿನೀಡಲಾಗಿದೆ. ಶಾಲೆ, ಕಾಲೇಜು ಮಟ್ಟದಲ್ಲೂ, ಕುಟುಂಬಶ್ರೀ ಸದಸ್ಯೆಯರಿಗೂ ತರಬೇತಿನೀಡುವ ಕಾಯಕ ನಡೆಯುತ್ತಿದೆ. ಮಹಿಳಾ ಸಬಲೀಕರಣ ಈ ಯೋಜನೆಯ ಪ್ರಧಾನ ಉದ್ದೇಶ. ಕೇರಳ ಪೊಲೀಸ್ ಇಲಾಖೆಯ ಮಾಹಿತಿಕೇಂದ್ರ ಪ್ರಕಟಿಸಿದ ಮಹಿಳೆಯರ ಸ್ವಯಂ ಸಂರಕ್ಷಣೆ ಸಂಬಂಧ ಪುಸ್ತಕವೂ ಇಲ್ಲಿ ಉಚಿತವಾಗಿ ವಿತರಿಸಲಾಗುತ್ತಿದೆ.