ಕಾಸರಗೋಡು: ರಾಷ್ಟ್ರದ ಪ್ರಥಮ ರಾಷ್ಟ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರ ನೀಲೇಶ್ವರ ಸಮೀಪದ ಕಿನಾನೂರು-ಕರಿಂದಳಂ ಗ್ರಾ.ಪಂನಲ್ಲಿ ನಿರ್ಮಾಣ ಹೊಂದಲಿದೆ. ಕೇಂದ್ರ ಆಯುಷ್ ಇಲಾಖೆ ಸಚಿವ ಶ್ರೀಪಾದ್ ಯಸ್ಸೋ ನಾಯಕ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಶಿಲಾನ್ಯಾಸವನ್ನು ಭಾನುವಾರ ನಿರ್ವಹಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆಯುರ್ವೇದ ಮತ್ತು ಯೋಗವು ದೇಶದ ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿವೆ. ಪಾರಂಪರಿಕ ಚಿಕಿತ್ಸಾ ಪದ್ಧತಿಯಲ್ಲಿ ಹೆಚ್ಚಿನ ಸಂಶೋಧನೆಗಳನ್ನು ನಡೆಸಿ ಚಿಕಿತ್ಸಾ ವಿಧಾನವನ್ನು ಹೆಚ್ಚು ಪ್ರಚುರಪಡಿಸಬೇಕಿರುವುದು ಪ್ರಸ್ತುತ ಅಗತ್ಯವಾಗಿದೆ ಎಂದರು. ಕೇಂದ್ರ ಸರಕಾರದ ಆಯುಷ್ ಮಂತ್ರಾಲಯದ ಸಹಕಾರದಲ್ಲಿ ನಿರ್ಮಾಣ ಹೊಂದಲಿರುವ ಸಂಶೋಧನಾ ಕೇಂದ್ರವು ಆರೋಗ್ಯ ಕ್ಷೇತ್ರದಲ್ಲಿ ಪರಿಣಾಮಕಾರಿ ಹೆಜ್ಜೆಯಿರಿಸಲಿದೆ ಎಂದರು. ಕೇರಳದಲ್ಲಿ ಚಾಲ್ತಿಯಲ್ಲಿರುವ ಪರಂಪರಾಗತ ಆಯುರ್ವೇದ, ಅಷ್ಟವೈದ್ಯ ಹಾಗೂ ಸಿದ್ಧಮರ್ಮ ಚಿಕಿತ್ಸಾ ವಿಧಾನಗಳು ಹೆಚ್ಚಿನ ಮೌಲ್ಯ ಮತ್ತು ಪ್ರಭಾವವನ್ನು ಹೊಂದಿದ್ದು, ಸಂಶೋಧನಾ ಕೇಂದ್ರದ ಮೂಲಕ ಇಂತಹ ಚಿಕಿತ್ಸಾ ವಿಧಾನಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಉತ್ತೇಜನ ಸಿಗಲಿದೆ ಎಂದರು. ಜೀವನ ಶೈಲಿ ಮೂಲಕ ಜನಮಂದಿಯನ್ನು ಕಾಡುವ ಹಲವು ರೋಗಗಳಿಗೆ ಆಯುರ್ವೇದ ಮತ್ತು ಯೋಗ ಪದ್ಧತಿಗಳು ಹೆಚ್ಚಿನ ಪರಿಣಾಮಕಾರಿ ಅಸ್ತ್ರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಯೋಗ ಪ್ರಕೃತಿ ಚಿಕಿತ್ಸಾ ಕೇಂದ್ರದ ನಿರ್ಮಾಣ ಪೂರ್ತಿಯಾದಲ್ಲಿ ಸ್ನಾತಕೋತ್ತರ ತರಗತಿಯನ್ನು ಕೇಂದ್ರದಲ್ಲಿ ಆರಂಭಿಸಲು ಅನುಮತಿ ನೀಡಲಾಗುವುದು ಎಂದು ಸಚಿವರು ಹೇಳಿದರು. 100 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ಸಹಿತ ಸಂಶೋಧನಾ ಕೇಂದ್ರವು ವರ್ಷದೊಳಗೆ ಪೂರ್ಣವಾಗಲಿದೆ ಎಂದ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಕೇರಳ ರಾಜ್ಯದ ಅಭಿವೃದ್ಧಿ ಮತ್ತು ಪರಿಣಾಮಕಾರಿ ಹೆಜ್ಜೆಗಳನ್ನು ಪ್ರಶಂಶಿಸಿದರು. ಕೇರಳ ರಾಜ್ಯದ ಕಳರಿ ಪಯಟ್ಟುನಂತಹ ಸ್ವ ರಕ್ಷಣಾ ಕಲೆಗೂ ಉನ್ನತ ಸ್ಥಾನವಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ ಎಂದರು. ಕೇರಳ ರಾಜ್ಯದ ಆಯುರ್ವೇದ ಚಿಕಿತ್ಸಾ ವಿಧಾನಗಳು ಪ್ರವಾಸೋದ್ಯಮದ ವಿಪುಲತೆಗೂ ಕಾರಣವಾಗಿದ್ದು, ರಾಜ್ಯದ ಹೆಚ್ಚಿನ ಪ್ರವಾಸಿ ಕೇಂದ್ರಗಳಲ್ಲಿ ಮತ್ತು ಯೋಗ ಗ್ರಾಮಗಳಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಟೀಚರ್ ಎಂಡೋಸಲ್ಫಾನ್ ಪೀಡಿತರಿಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸಾ ಸೌಕರ್ಯಗಳನ್ನು ಸರಕಾರ ಕೊಡಮಾಡುತ್ತಿದೆ, ಅವರ ಅವಶ್ಯಕತೆಗಳನ್ನು ಮನಗಂಡು ಉತ್ತಮ ರೀತಿಯ ಚಿಕಿತ್ಸಾ ಸೌಕರ್ಯಗಳನ್ನು ಯೋಗ ಮತ್ತು ಆಯುರ್ವೇದ ಚಿಕಿತ್ಸಾ ಪದ್ಧತಿಯ ಮೂಲಕ ನೀಡಲಾಗುವುದಾಗಿ ತಿಳಿಸಿದರು. ಮುಳಿಯಾರು ಗ್ರಾಮದಲ್ಲಿ ಎಂಡೋ ಪೀಡಿತರಿಗೆ ನಿರ್ಮಿಸಲಾದ ಪುನರ್ವಸತಿ ಕೇಂದ್ರವನ್ನು ವರ್ಷದೊಳಗೆ ಹಸ್ತಾಂತರಿಸಲಾಗುವುದು ಎಂದರು. ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ತಡೆಗೆ ಹೆಚ್ಚಿನ ಜಾಗೃತೆ ವಹಿಸಲಾಗಿದ್ದು ಈ ನಿಟ್ಟಿನಲ್ಲಿ 68 ಕೋಟಿ ರೂ. ಯೋಜನೆ ರೂಪಿಸಲಾಗಿದೆ ಎಂದರು.
ಯೋಗ ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರವು ಕೇವಲ ಉತ್ತರ ಕೇರಳಕ್ಕೆ ಮಾತ್ರವಲ್ಲದೆ ಅಖಂಡ ಕೇರಳದ ಜನರ ಆರೋಗ್ಯ ರಕ್ಷಣೆಯ ಕಾರ್ಯಕ್ಕೆ ಪೂರಕವಾಗಿರಲಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಎರಡು ವರ್ಷಗಳ ಹಿಂದೆ ಯೋಗ ಪ್ರಕೃತಿ ಚಿಕಿತ್ಸಾ ಕೇಂದ್ರದ ಯೋಜನೆಗೆ ರೂಪುರೇಶೆ ಸಿದ್ಧಪಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ನೀಡಲಾಗಿತ್ತು, ಕಂದಾಯ ಇಲಾಖೆ ಮೂಲಕ ಅಗತ್ಯವಾದ ಸ್ಥಳವನ್ನು ಕೇಂದ್ರದ ನಿರ್ಮಾಣಕ್ಕೆ ಹಸ್ತಾಂತರಿಸಲಾಗಿದೆ ಎಂದು ಸಚಿವರು ಹೇಳಿದರು. ಕಾರ್ಯಕ್ರಮದಲ್ಲಿ ಸಂಸದ ಪಿ.ಕರುಣಾಕರನ್ ಮುಖ್ಯ ಅತಿಥಿಯಾಗಿದ್ದರು, ಶಾಸಕರಾದ ಕೆ.ಕುಞರಾಮನ್, ಎಂ.ರಾಜಗೋಪಾಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ ಬಶೀರ್, ಎ.ಡಿ.ಎಂ ದೇವೀದಾಸ್, ಕಾಞಂಗಾಡು ನಗರಸಭಾ ಅಧ್ಯಕ್ಷ ವಿ.ವಿ ರಮೇಶನ್, ಪರಪ್ಪ ಬ್ಲಾ.ಪಂ ಅಧ್ಯಕ್ಷ ಪಿ.ರಾಜನ್ ಕಿನಾನೂರು-ಕರಿಂದಳ ಗ್ರಾ.ಪಂ ಅಧ್ಯಕ್ಷೆ ವಿಧುಬಾಲಾ ಮೊದಲಾದವರು ಉಪಸ್ಥಿತರಿದ್ದರು.