ಸಂಪನ್ನಗೊಂಡ ಸೋಮಯಾಗದ ಗಮನ ಸೆಳೆದ ವಿಚಾರ-ವೈವಿಧ್ಯಗಳು
0
ಫೆಬ್ರವರಿ 28, 2019
ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಫೆ.18 ರಿಂದ 24ರ ತನಕ ನಡೆದ ಅರುಣ ಕೇತುಕ ಚಯನ ಸಹಿತ ವಿಶ್ವಜಿತ್ ಅತಿರಾತ್ರ ಸೋಮಯಾಗ ಗಡಿನಾಡಿನಲ್ಲಿ ಹೊಸ ಮನ್ವಂತರ ಸೃಷ್ಟಿಗೆ ಕಾರಣವಾಗಲಿದೆ ಎಂಬ ಸದಾಶಯ ಮೂಡಿಸುವಲ್ಲಿ ಸಫಲವಾಗಿದೆ.
ಯಾಗದ ಆರಂಭದ ದಿನದಿಂದ ಸಮಾರೋಪದ ವರೆಗೆ ಒಟ್ಟು 3.5 ಲಕ್ಷ ಮಂದಿ ಪುಣ್ಯ ಯಾಗದಲ್ಲಿ ಪಾಲ್ಗೊಂಡಿರುವರೆಂದು ಆಶ್ರಮದ ಅಧಿಕೃತರು ತಿಳಿಸಿರುವರು. ಅಚ್ಚುಕಟ್ಟಾದ ವ್ಯವಸ್ಥೆಗಳು, ಸ್ವಯಂಸೇವಕರ ನಿರಂತರ ಚಟುವಟಿಕೆ, ಯಾಗ ಶಾಲೆಯಲ್ಲಿ ವೈದಿಕರ-ಅಗ್ನಿಹೋತ್ರಿಗಳ ನಿರಂತರ ವೇದಘೋಷಗಳೊಮದಿಗಿನ ಮಂತ್ರೋಚ್ಚಾರಣೆ ಪರಿಸರದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು.
ಯಾಗಭೂಮಿಗೆ 8 ಮಂದಿ ಯತಿವರ್ಯರು, ಕೇಂದ್ರ ಸಚಿವರು, ಸಂಸದರು, ವಿವಿಧ ರಾಜಕೀಯ ಪಕ್ಷಗಳ ನಾಯಕರು, 14 ವಿವಿಧ ಸಮುದಾಯಗಳ ನಾಯಕರು-ಪ್ರತಿನಿಧಿಗಳು, ಅನ್ಯ ಧರ್ಮೀಯ ಮುಖಂಡರು, ವಿದೇಶಿಯರು, ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಗುಜರಾಥ್, ಗೋವಾ ಸಹಿತ ವಿವಿಧ ರಾಜ್ಯಗಳ ಭಕ್ತರು ಭಾಗವಹಿಸಿದ್ದು ವಿಶೇಷವಾಗಿ ಗುರುತಿಸಲ್ಪಟ್ಟಿತು.
ಪ್ರಕೃತಿ ಪೂಜನಃ
ಯಾಗಗಳ ಮೂಲ ಪರಿಕಲ್ಪನೆ ಪ್ರಕೃತಿಯೊಂದಿಗಿನ ಅನುಸಂಧಾನವಾಗಿದ್ದು, ವಿಶೇಷವಾದ ಸೋಮಯಾಗ ಪ್ರಕ್ರಿಯೆಯಲ್ಲಿ ಆಮೆ, ಕುದುರೆ ಸಹಿತ ವಿವಿಧ ಪ್ರಾಣಿಗಳನ್ನು ಬಳಸಲಾಗುವ ಪರಿಪಾಠವಿದೆ. ಆದರೆ ಕೊಂಡೆವೂರಿನ ಸೋಮಯಾಗದಲ್ಲಿ ಆಮೆ, ಕುದುರೆ,ಹಸು ಹಾಗೂ ಆಡುಗಳನ್ನು ವಿವಿಧ ಸಂದರ್ಭದಲ್ಲಿ ಬಳಸಲಾಗಿತ್ತು. ಸೃಷ್ಟಿಯ ಮೂಲದ ಪರಿಕಲ್ಪನೆಯಾಗಿ ಆಮೆಯೊಂದನ್ನು ಪ್ರಧಾನ ಯಾಗ ಕುಂಡದೊಳಗೆ ಬಿಡಲಾಗಿತ್ತು. ಕಪ್ಪೆಯನ್ನೂ ಬಳಸಬೇಕಾಗಿದ್ದು, ಅಗತ್ಯ ಸಂದರ್ಭದಲ್ಲಿ ಕಪ್ಪೆ ಲಭ್ಯವಾಗಿರಲಿಲ್ಲ. ಆದರೆ ಭಾನುವಾರ ನಡೆದ ಸೋಮಯಾಗದ ಪೂರ್ಣಾಹುತಿಯ ಹೊತ್ತಿಗೆ ಯಾಗಭೂಮಿಯ ಸನಿಹ ಕಪ್ಪೆಗಳು ಓಡಾಡುತ್ತಿರುವುದು ಮತ್ತು ಚಿಪ್ಪ ಸರೀಸೃಪವೊಂದು ಯಾರಿಗೂ ತೊಂದರೆಯಾಗದಂತೆ ಅತ್ತಿತ್ತ ಓಡಾಡುತ್ತಿದ್ದುದು ಭಜಕರ ಭಕ್ತಿಗೆ ಬಲ ನೀಡಿತು.
ಆಗಸದಲ್ಲಿ ವಿಸ್ಮಯ:
ಸೋಮಯಾಗ ಆರಂಭ ದಿನದಿಂದ ಮೊದಲ್ಗೊಂಡು ಸಮಾರೋಪದವರೆಗೂ ಪ್ರತಿನಿತ್ಯ ಮಧ್ಯಾಹ್ನ ವೇಳೆ ಯಾಗಭೂಮಿಯ ನೇರ ಮೇಲ್ಬದಿಯ ಆಗಸದಲ್ಲಿ ಬೃಹತ್ ಗಿಡುಗವೊಂದು ಪ್ರದಕ್ಷಿಣಾ ಕ್ರಮದಲ್ಲಿ ಹಾರಾಡಿ ಮರೆಯಾಗುತ್ತಿತ್ತು. ಯಾಗ ಪೂರ್ಣಾಹುತಿಯ ಸಂದರ್ಭ ದೊಡ್ಡ ಗಿಡುಗನ ಜೊತೆಗೆ 6 ಪುಟ್ಟ ಮರಿಗಿಡುಗಗಳೂ ನಭೋ ಮಂಡಲದಲ್ಲಿ ಕಾಣಿಸಿಕೊಂಡು ಯಾಗ ಪಾವಿತ್ರ್ಯವನ್ನು ಸಾರಿದಂತೆ ಭಾಸವಾಯಿತು.
ಕುಬೇರನ ಯಾಗ ವೀಕ್ಷಣೆ:
ಯಾಗದ ಕೊಟ್ಟ ಕೊನೆಯ ಹಂತವಾಗಿ ಸಂಪತ್ತಿನ ಅಧಿ ದೇವತೆ ಕುಬೇರನ ಯಾಗ ವೀಕ್ಷಣೆ ನಡೆಯಿತು. ತೆಂಕುತಿಟ್ಟು ಯಕ್ಷಗಾನ ವೇಶದ ಶೈಲಿಯಲ್ಲಿ ವೇಶತೊಟ್ಟು ಆಗಮಿಸಿದ ಕುಬೇರ ಯಾಗ ವೀಕ್ಷಣೆ ನಡೆಸಿದನು. ಋತ್ವಿಜರ ಕುಬೇರ ಮಂತ್ರದ ಜೊತೆಗೆ ಯಾಗ ಕ್ಷೇತ್ರದಲ್ಲಿ ಪರ್ಯಟನೆ ನಡೆಸಿ ಬಳಿಕ ಸಂತೃಪ್ತಿಯ ಭಾವದೊಂದಿಗೆ ಯಾಗ ಭೂಮಿಯ ರುದ್ರನಾಹುತಿಗೆ ಒಪ್ಪಿಗೆ ನೀಡಲಾಯಿತು.
ಪಾಕಿಗೆ ಪಾಪಿಸ್ಥಾನದ ಪಟ್ಟ:
ಯಾಗ ಸಂಬಂಧಿಯಾಗಿ ನಡೆದ ಎಲ್ಲಾ ದಿನಗಳ ಧಾರ್ಮಿಕ ಸಭೆಯಲ್ಲಿ ರಾಷ್ಟ್ರದ ಸೈನಿಕರ ಮೇಲೆ ಧಾಳಿ ನಡೆಸಿ ಕೊಲೆಗೈದ ಪಾಕಿಸ್ಥಾನದ ಬಗ್ಗೆ ಕಟುವಾದ ವಿಮರ್ಶೆ ವ್ಯಕ್ತಗೊಂಡಿತ್ತು. ಪಾಕಿಸ್ಥಾನವು ಪಾಪಿಗಳ ಆಸ್ಥಾನ ಎಂಬ ಮಾತುಗಳು ಕೇಳಿಬಂದವು. ಜೊತೆಗೆ ಯಾಗದ ಪೂರ್ಣ ಫಲ ರಾಷ್ಟ್ರದ ಸುಗಮ ಆಡಳಿತ ಮತ್ತು ರಕ್ಷಣೆಗೆ ನಿಕ್ಷಪ್ತವಾಗುವುದೆಂಬ ಸಂಕಲ್ಪ ಮಾಡಲಾಯಿತು.