ಪೆರ್ಲ: ಇಂದ್ರಿಯಗಳಿಗೆ ಅತೀತವಾದ ಜಗತ್ತನ್ನು ನಿಯಂತ್ರಿಸುವ ಶಕ್ತಿ ಪರಮಾತ್ಮ.ನೀರೆರೆದ ವೃಕ್ಷ ಫಲ ಕೊಡುವಂತೆ ನಂಬಿಕೆ ಇರಿಸಿದಲ್ಲಿ ಪರಮಾತ್ಮ ಅಭಯ ನೀಡುವನು.ನಾಸ್ತಿಕತೆ, ಚಾರ್ವಾಕ ಭಾವವಿದ್ದಲ್ಲಿ ದುರ್ಗುಣ, ದುರ್ವಿಚಾರ, ದುರಾಲೋಚನೆ ದುಷ್ಕೃತ್ಯಗಳು ತುಂಬಿ ತುಳುಕಾಡಿ ಅಧರ್ಮ ನೆಲೆನಿಲ್ಲುವುದು.ಆಸ್ತಿಕತೆ, ದೇವರ ಭಯವಿದ್ದಲ್ಲಿ ಋಣಾತ್ಮಕತೆ ದೂರವಾಗಿ ಧರ್ಮ ನೆಲೆ ಗೊಳ್ಳುವುದು. ತಾನು ಬದುಕಿ ಇನ್ನೊಬ್ಬನನ್ನು ಬದುಕಲು ಬಿಡುವ ಆಚಾರವೇ ಧರ್ಮ.ನಾವು ಧರ್ಮವನ್ನು ಕಾಪಾಡಿದಲ್ಲಿ ಧರ್ಮವು ನಮ್ಮನ್ನು ಹಾಗೂ ಸಮಾಜವನ್ನು ಕಾಪಾಡುವುದು ಎಂದು ಶ್ರೀಸಂಪುಟ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನಗೈದು ತಿಳಿಸಿದರು.
ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಮತ್ತು ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶುಕ್ರವಾರ ನಡೆದ ಸಮಾರಂಭದಲ್ಲಿ ಉಪಸ್ಥಿತರಿದ್ದು ಆಶೀರ್ವಚನಗೈದು ಅವರು ಮಾತನಾಡಿದರು.
ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ ಅವರು, ಭೌತಿಕ ಬೆಳವಣಿಗೆಯೊಂದಿಗೆ ಆಂತರಿಕ ಬೆಳವಣಿಗೆಗೆ ಒತ್ತು ನೀಡಿ ತನು ಮನ ಶುದ್ಧಿಯೊಂದಿಗೆ ಸದ್ವಿಚಾರ, ಸತ್ಕರ್ಮ ಮೈಗೂಡಿಸಿದರೆ ಜೀವನ ಪರಮ ಪಾವನವಾಗುವುದು ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮಗಳು, ಪುರಾಣ ಪ್ರವಚನಗಳು ಮನುಷ್ಯನಿಗೆ ಮಾನಸಿಕ ನೆಮ್ಮದಿ ನೀಡುವುದು. ಗ್ರಾಮೀಣ ಪರಂಪರೆ ಸೂಗಡನ್ನು ಪ್ರತಿಬಿಂಬಿಸುವ ಸನಾತನ ಜಾನಪದ ಕಲೆ ಮತ್ತು ಸಂಸ್ಕೃತಿಗಳು ಸಾಹಿತ್ಯ ಮತ್ತು ಕಲೆಗಳ ಮೂಲ ಬೇರುಗಳು ಜಾನಪದದಲ್ಲಿವೆ.ಜಾನಪದ ಗೀತೆಗಳ ಅಂತಸತ್ವವನ್ನು ಅರಿಯಬೇಕು.ಆಶಯ ಪರಂಪರೆಯಲ್ಲಿ ಬಂದ ಸೂಕ್ತಿಗಳು ಧೀಶಕ್ತಿಯನ್ನು ಹೆಚ್ಚಿಸುವುದು.ಯಾಂತ್ರಿಕ ಯುಗದಲ್ಲಿ ಯುವಕರು ಅಂತರ್ಮುಖಿಗಳಾಗಿ ಏಕತಾನತೆ ಅನುಭವಿಸುತ್ತಿದ್ದಾರೆ.ಜೀವನವನ್ನು ದರ್ಶನ ಮಾಡಬೇಕೇ ಹೊರತು ಪ್ರದರ್ಶನವಲ್ಲ. ಆಧುನಿಕ ಅಬ್ಬರಗಳಿಗೆ ಮಾರುಹೋಗಿ ಆಚರಣೆಗಳಲ್ಲಿ ಭಿನ್ನರೀತಿಯ ವಾತಾವರಣ ನಿರ್ಮಾಣವಾಗಿದೆ.ಸನಾತನ ಸಂಸ್ಕೃತಿ, ಆಶಯ ಪರಂಪರೆ, ಮೂಲ ಪರಂಪರೆಯನ್ನು ಉಳಿಸಿ ಆಧ್ಯಾತ್ಮಿಕತೆ ಬೆಳೆಸುವುದು ನಮ್ಮ ಕರ್ತವ್ಯ. ಧಾರ್ಮಿಕ ಪ್ರಜ್ಞೆ, ಧರ್ಮ ಸೂಕ್ಷ್ಮತೆ ಇದ್ದಲ್ಲಿ ವ್ಯಸನಗಳಿಗೆ ಬಲಿಯಾಗದೆ ಸ್ವಸ್ಥ ಜೀವನ ನಡೆಸಬಹುದು.ಮನೆ, ಬೆಳೆಯುವ ಪರಿಸರ, ಒಡನಾಟ,ಮಕ್ಕಳ ಚಾರಿತ್ರ್ಯ ರೂಪಿಸುವಲ್ಲಿ ನಿರ್ಣಾಯಕ. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕಲಿಸಿ ಚಾರಿತ್ರ್ಯ ರೂಪಿಸಬೇಕು.ಸುಮ!ನಸ್ಕರಿಂದ ಸುಸಂಸ್ಕೃತ ಜನಾಂಗ ಹಾಗೂ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.
ಬ್ರಹ್ಮಶ್ರೀ ವೇ.ಮೂ.ಕುಂಟಾರು ವಾಸುದೇವ ತಂತ್ರಿ ಅನುಗ್ರಹ ಭಾಷಣ ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಮಾರ್ಗದರ್ಶಕ ಡಾ.ಶ್ರೀಪತಿ ಕಜಂಪಾಡಿ ಅಧ್ಯಕ್ಷತೆ ವಹಿಸಿ
ಮಾತನಾಡಿ, ಧರ್ಮ ಹಾಗೂ ದೇಶವನ್ನು ಮುನ್ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ. ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುವ ಸ್ವಯಂ ಸೇವಕರು ಸುಸಂಸ್ಕೃತಿಯ ಶ್ರೇಷ್ಠ ಉದಾಹರಣೆ.ತಾಯಿ ಭಾರತಿಯನ್ನು ಗೌರವಿಸುವುದು ಭಾರತಾಂಬೆಯ ಮಕ್ಕಳಾದ ನಮ್ಮೆಲ್ಲರ ಕರ್ತವ್ಯ.
ಆಚಾರ, ಅನುಷ್ಠಾನ ಪಾಲನೆ ನೆಪದಲ್ಲಿ ಪಡ್ರೆಯ ಪ್ರಮುಖ ಕಾರಣಿಕ ಕ್ಷೇತ್ರವೊಂದರಲ್ಲಿ ದೈವ ಮಹಿಮೆ ಸಂದರ್ಭದಲ್ಲಿ ಕೆಲವೊಂದು ಸಮುದಾಯಕ್ಕೆ ಒಳಪಟ್ಟ ಜನರಿಗೆ ನೇರ ಕಾಣಿಕೆ ಸಂಪ್ರದಾಯ, ಸಮೂಹ ಭೋಜನ ವ್ಯವಸ್ಥೆಯನ್ನು ನಿರಾಕರಿಸಲಾಗಿದೆ.ಈ ಕುರಿತು ಬೇಡಿಕೆ ಇರಿಸಿದಾಗ ತಂತ್ರಿಗಳ ಗಮನಕ್ಕೂ ತಾರದೆ ದೈವಜ್ಞರಲ್ಲೂ ವಿಮರ್ಷಿಸದೆ ಮಹಿಮೆಯನ್ನು ಏಕಾಏಕಿ ನಿಲ್ಲಿಸಿ ಕ್ಷೇತ್ರದ ಆಚಾರ-ನಂಬಿಕೆಗಳನ್ನು ಮುಷ್ಟಿಯಲ್ಲಿ ಇರಿಸಲಾಗಿದೆ.ಇದನ್ನು ಯಾರೂ ಪ್ರಶ್ನಿಸದಿರುವುದು ವಿಪರ್ಯಾಸ.ಭಿನ್ನವಿಸಿದಾಗ ದಿವ್ಯ ನಿರ್ಲಕ್ಷ್ಯ ತೋರಿದ್ದು, ಇದರಲ್ಲಿ ರಾಜಕೀಯ ನುಸುಳುವ, ನಿಯಮ ಪಾಲಕರು, ಆದಾಯ ಇಲಾಖೆ, ಸರಕಾರ ಹಸ್ತಕ್ಷೇಪ ನಡೆಸುವುದಕ್ಕೂ ಮುನ್ನ ಪರಿಹಾರ ಕಾಣುವುದು ಅನಿವಾರ್ಯ.ಸಮಾಜದ ಯಾರನ್ನೂ ಮುಖ್ಯ ವಾಹಿನಿಯಿಂದ ಹೊರ ಹೋಗದಂತೆ ತಡೆಯುವಲ್ಲಿ ನೇತೃತ್ವ ವಹಿಸುವವರನ್ನು ತಿದ್ದಿ ತೀಡಿ ಜಾತಿ ಕುಲವೆನ್ನದೆ ಎಲ್ಲರನ್ನೂ ಸಮಾನ ರೀತಿ ಕಾಣುವ ಪರಿಹಾರ ಕಾಣಬೇಕಾಗಿದೆ. ಧರ್ಮ ರಕ್ಷಣೆಗೆ ಲಕ್ಷ್ಮಣ ರೇಖೆಯನ್ನು ದಾಟುವುದು ಅನಿವಾರ್ಯ ವಾಗಿದ್ದು ಇಂದಿಗೂ ಈ ರೀತಿಯ ಜಾತಿ ಬೇಧ ನೀತಿ ತೋರುತ್ತಿರುವುದು ಸಮಂಜಸವಲ್ಲ ಎಂದು ವಿಷಾಧ ವ್ಯಕ್ತ ಪಡಿಸಿದರು.
ಎಣ್ಮಕಜೆ ಗ್ರಾ.ಪಂ.ಸದಸ್ಯ ಪುಟ್ಟಪ್ಪ ಖಂಡಿಗೆ, ಮುಗು ಸುಬ್ರಾಯ ದೇವಳದ ಆಡಳಿತ ಮೊಕ್ತೇಸರ ರವೀಂದ್ರನಾಥ್ ನಾಯಕ್ ಶೇಣಿ ಮಾತನಾಡಿದರು.ಕ್ಷೇತ್ರದ ಪ್ರಧಾನ ಸಂಚಾಲಕ ಟಿ.ಆರ್.ಕೆ.ಭಟ್ ಉಪಸ್ಥಿತರಿದ್ದರು.ಶಿಕ್ಷಕ ಲೋಕನಾಥ ಶೆಟ್ಟಿ ಮಾಯಿಲೆಂಗಿ ಸ್ವಾಗತಿಸಿ, ರಾಜಶೇಖರ್ ಪೆರ್ಲ ವಂದಿಸಿದರು.ಉದಯ ಕುಮಾರ್ ಸ್ವರ್ಗ ನಿರೂಪಿಸಿದರು.
ಶನಿವಾರ ಬೆಳಿಗ್ಗೆ 108 ಕಾಯಿಗಳ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ಭೋಜನ ನಡೆಯಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಉಕ್ಕಿನಡ್ಕ ಅಯ್ಯಪ್ಪ ಸ್ವಾಮಿ ಭಜನಾ ತO ಡದವರಿಂದ ಭಜನಾ ಸಮಕೀರ್ತನೆ, ವಿದ್ಯಾಪಲ್ಲವಿ ಸಮಗೀತ ಶಾಲೆ ಪೆರ್ಲದವರಿಂದ ಭಕ್ತಿ ಭಾವ ಸಂಗಮ, ಸ್ವರ್ಣಲತಾ ಹಾಗೂ ಅವನೀರ್ಶ ಜಿ.ಶೆಟ್ಟಿಯವರಿಂದ ಭಜನೆ, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಭರತನಾಟ್ಯ, ಜನಪದ ನೃತ್ಯ, ಭಸ್ಮಾಸುರ ಮೋಹಿನಿ ನೃತ್ಯ ರೂಪಕಗಳು ನಡೆಯಿತು. ಸಂಜೆ 5.30 ರಿಂದ ಧಾರ್ಮಿಕ ಸಭೆ ನಡೆಯಿತು.
ಇಂದಿನ ಕಾರ್ಯಕ್ರಮ:
ಭಾನುವಾರ ಬೆಳಿಗ್ಗೆ 6ಕ್ಕೆ ಚಂಡಿಕಾ ಹವನ, ಭಜನಾ ಸತ್ಸಂಗ, ಚಂಡಿಕಾ ಹವನದ ಪೂರ್ಣಾಹುತಿ, ತುಲಾಭಾರ ಸೇವೆ, ಮಹಾಪೂಜೆ ನಡೆಯಲಿದೆ. ಅಪರಾಹ್ನ ಭಜನಾ ಸಮಕೀರ್ತನೆ, ಸಂಜೆ 6 ರಿಂದ ಕಜಂಬು ಸೇವೆ, ಮಹಾಪೂಜೆ, ರಾತ್ರಿ 8 ರಿಂದ ಶ್ರೀಉಳ್ಳಾಲ್ತಿ ದೈವದ ಭಂಡಾರ ಹೊರಡುವುದು, ಅಶ್ವರಥ ಸವಾರಿ, ಶ್ರೀಉಳ್ಳಾಲ್ತಿ ನೇಮ, ಪ್ರಸಾದ ವಿತರಣೆ ನಡೆಯಲಿದೆ.