ಇಂಡೋ-ಪಾಕ್ ಸಂಘರ್ಷ: ಬಿಕ್ಕಟ್ಟು ನಿವಾರಣೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ಇರಾನ್
0
ಫೆಬ್ರವರಿ 28, 2019
ಟೆಹ್ರಾನ್: ಭಾರತೀಯ ವಾಯುಸೇನೆ ಏರ್ ಸ್ಟ್ರೈಕ್ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಭುಗಿಲೆದ್ದಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ತಾನು ಉಭಯ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಇರಾನ್ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಜರೀಫ್ ಅವರು, ತಾವು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರಿಗೆ ದೂರವಾಣಿ ಕರೆ ಮಾಡಿದ್ದ ಮೊಹಮ್ಮದ್ ಜಾವೇದ್ ಜರೀಫ್ ಅವರು ಸಂಯಮ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅಂತೆಯೇ ಇರಾನ್ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲೂ ಕೂಡ ಸಿದ್ಧ. ಇದೇ ವಿಚಾರವಾಗಿ ಭಾರತದೊಂದಿಗೂ ತಾವು ಮಾತುಕತೆ ನಡೆಸುವುದಾಗಿ ಜರೀಫ್ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಜರೀಫ್ ಅವರ ಹೇಳಿಕೆ ಖುರೇಷಿ ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿಲ್ಲ.
ಏತನ್ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಅವರೂ ಕೂಡ ಉಭಯ ದೇಶಗಳ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಹಾಲಿ ಪರಿಸ್ಥಿತಿ ನೋಡಿ ನನ್ನ ಹೃದಯ ಭಾರವಾಗುತ್ತಿದೆ. ನನ್ನ ಭಾರವಾದ ಹೃದಯದಿಂದ ಮನವಿ ಮಾಡುತ್ತಿದ್ದು ಸಂಯಮ ಕಾಯ್ದುಕೊಳ್ಳಿ, ಭಾರತ-ಪಾಕಿಸ್ತಾನ ಶತ್ರುಗಳಲ್ಲ. ಇಬ್ಬರೂ ಒಂದೇ..ನಮಗೆ ಯುದ್ಧಬೇಡ ಶಾಂತಿ ಬೇಕು ಎಂದು ಟ್ವೀಟ್ ಮಾಡಿದ್ದಾರೆ.