ಬದಿಯಡ್ಕ: ಬದಿಯಡ್ಕ ಚಿನ್ಮಯ ವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ವರ್ಗ ಸ್ವಾಮಿವಿವೇಕಾನಂದ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ಕೆ.ವೈ. ಧ್ವಜಾರೋಹಣಗೈದು ಮಾತನಾಡಿ, ಸಂವಿಧಾನವು ನಮಗೆ ವಿವಿಧ ಆಯಾಮಗಳನ್ನು ನೀಡಿದ್ದು, ಅದನ್ನು ಪಾಲಿಸುವುದು ನಮ್ಮ ಧರ್ಮವಾಗಿದೆ. ಸಂವಿಧಾನದ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಚಿನ್ಮಯ ವಿದ್ಯಾಲಯದ ಕಾರ್ಯದರ್ಶಿ ಜ್ಞಾನದೇವ ಶೆಣೈ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್, ಪ್ರಭಾರ ಪ್ರಾಂಶುಪಾಲ ಲವಕುಮಾರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ `ಚಿನ್ಮಯ ಫೆಸ್ಟ್'ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಹಿರಿಯ ಶಿಕ್ಷಕಿ ಮಾಲತಿ ಪೈ ಕಾರ್ಯಕ್ರಮ ನಿರೂಪಿಸಿದರು.