ಉಗ್ರ ಮಸೂದ್ ಅಜರ್ ಹೆಡೆಮುರಿ ಕಟ್ಟಲು ವೇದಿಕೆ ಸಿದ್ಧ; ಪಾಕ್ ಸರ್ಕಾರಕ್ಕೆ ಡಾಸಿಯರ್ ಹಸ್ತಾಂತರಿಸಿದ ಭಾರತ!
0
ಫೆಬ್ರವರಿ 28, 2019
ನವದೆಹಲಿ: ಒಂದೆಡೆ ಪಾಕಿಸ್ತಾನದ ಯುದ್ಧೋನ್ಮಾದ, ಮತ್ತೊಂದೆಡೆ ಉಗ್ರರ ಕಾಟದ ನಡುವೆಯೂ ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಹೆಡೆಮುರಿ ಕಟ್ಟಲು ಭಾರತ ವೇದಿಕೆ ಸಜ್ಜುಗೊಳಿಸುತ್ತಿದ್ದು, ಇಂದು ಅಧಿಕೃತವಾಗಿ ಪಾಕಿಸ್ತಾನ ಸರ್ಕಾರಕ್ಕೆ ತನ್ನ ರಾಯಭಾರಿ ಮೂಲಕ ಡಾಸಿಯರ್ ಅನ್ನು ಭಾರತ ಸರ್ಕಾರ ಹಸ್ತಾಂತರಿಸಿದೆ.
ಏನಿದು?
ಓರ್ವ ವ್ಯಕ್ತಿ, ಅಪರಾಧಿ ಕುರಿತ ಸಾಕ್ಷ್ಯಾಧಾರಗಳ ಸಹಿತದ ಸಂಪೂರ್ಣ ವಿವರಗಳುಳ್ಳ ಕಡತವೇ ಡಾಸಿಯರ್.. ಉಗ್ರ ಮಸೂದ್ ಮತ್ತು ಬಾಲಾಕೋಟ್ ಉಗ್ರ ಕ್ಯಾಂಪ್ ಸೇರಿದಂತೆ ಆತನ ಉಗ್ರ ಚಟುವಟಿಕೆಗಳ ಕುರಿತ ಡಾಸಿಯರ್ ಒಂದನ್ನು ಈ ಹಿಂದೆ ಸ್ವತಃ ವಿಶ್ವಸಂಸ್ಥೆ ಸಿದ್ಧಪಡಿಸಿತ್ತು.
ಇಂತಹುದೇ ಡಾಸಿಯರ್ ಒಂದನ್ನು ಇದೀಗ ಭಾರತ ಸರ್ಕಾರ ಕೂಡ ಸಿದ್ಧ ಪಡಿಸಿದ್ದು, ಈ ಡಾಸಿಯರ್ ಅನ್ನು ಪಾಕ್ ಸರ್ಕಾರಕ್ಕೆ ಹಸ್ತಾಂತರ ಮಾಡಿದೆ. ಇಷ್ಟು ಭಾರತ ಸರ್ಕಾರ ಸಿದ್ಧ ಪಡಿಸಿರುವ ಡಾಸಿಯರ್ ನಲ್ಲಿ ಏನಿದೆ ಗೊತ್ತಾ..?
ದಿ ಒನ್ ಅಂಡ್ ಓನ್ಲಿ ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಸಂಸ್ಥಾಪಕ ಮಸೂದ್ ಅಜರ್ ಮತ್ತು 44 ಮಂದಿ ಯೋಧರ ಧಾರುಣ ಸಾವಿಗೆ ಕಾರಣವಾದ ಪುಲ್ವಾಮ ಉಗ್ರ ದಾಳಿ ಸಂಪೂರ್ಣ ವಿವರಗಳನ್ನು ಭಾರತ ಸರ್ಕಾರ ತನ್ನ ಡಾಸಿಯರ್ ನಲ್ಲಿ ಅಳವಡಿಸಿದೆ. ಪುಲ್ವಾಮ ಉಗ್ರ ದಾಳಿಯಲ್ಲಿ ತಮಗೆ ದೊರೆತ ಸಾಕ್ಷ್ಯಾಧಾರಗಳನ್ನೂ ಕೂಡ ಡಾಸಿಯರ್ ನಲ್ಲಿ ಲಗತ್ತಿಸಿದೆ. ಪುಲ್ವಾಮ ಉಗ್ರ ದಾಳಿಗೆ ಮಸೂದ್ ಅಜರ್ ನೇರ ಕೈವಾಡದ ಸಾಕ್ಷ್ಯಗಳನ್ನು ಭಾರತ ಲಗತ್ತಿಸಿದೆ ಎನ್ನಲಾಗಿದೆ.
ಈ ಮಹತ್ವದ ದಾಖಲೆಯನ್ನು ಕೇಂದ್ರ ವಿದೇಶಾಂಗ ಇಲಾಖೆ ಅಧಿಕೃತವಾಗಿ ಪಾಕಿಸ್ತಾನ ಸರ್ಕಾರಕ್ಕೆ ರವಾನೆ ಮಾಡಿರುವುದರಿಂದ ಇದೀಗ ಪಾಕಿಸ್ತಾನ ಸರ್ಕಾರ ಈ ಡಾಸಿಯರ್ ಅನ್ನು ಗಂಭೀರವಾಗಿ ಪರಿಗಣಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದು ವೇಳೆ ಇದನ್ನು ಪಾಕ್ ಸರ್ಕಾರ ನಿರ್ಲಕ್ಷಿಸಿದ್ದೇ ಆದರೆ ಆಗ ಅದು ವಿಶ್ವಸಂಸ್ಥೆಯ ಮೆಟ್ಟಿಲೇರಲಿದೆ. ಈ ಭಯ ಇದೀಗ ಪಾಕಿಸ್ತಾನಕ್ಕೆ ಇರಲಿದೆ.