ಯುವ ಕವಯಿತ್ರಿ ಪರಿಣಿತ ರವಿ ಅವರ ಕೃತಿಗಳ ಲೋಕಾರ್ಪಣೆ ಏ. 7 ರಂದು
0
ಮಾರ್ಚ್ 27, 2019
ಬದಿಯಡ್ಕ: ಯುವ ಕವಯಿತ್ರಿ ಪರಿಣಿತ ರವಿ ಎಡನಾಡು ಅವರ ನೂತನ ವಾತ್ಸಲ್ಯ ಸಿಂಧು(ಕಥಾ ಸಂಕಲನ) ಹಾಗೂ ಸುಪ್ತ ಸಿಂಚನ(ಕವನ ಸಂಕಲನ)ಕೃತಿಗಳ ಲೋಕಾರ್ಪಣೆ ಸಮಾರಂಭ ಏ. 7 ರಂದು ಭಾನುವಾರ ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ಬೆಳಿಗ್ಗೆ 10 ರಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಮಂಗಳೂರು ವಿವಿಯ ಆಂಗ್ಲ ಸಾಹಿತ್ಯ ಅಧ್ಯಯನ ವಿಭಾಗ ಮುಖ್ಯಸ್ಥೆ ಡಾ.ರಾಜಲಕ್ಷ್ಮೀ ಎನ್.ಕೆ.ಉದ್ಘಾಟಿಸುವರು. ನಿವೃತ್ತ ಪ್ರಾಧ್ಯಾಪಕಿ, ಸಾಹಿತಿ ಡಾ.ಯು.ಮಹೇಶ್ವರಿ ಅವರು ಕಥಾ ಸಂಕಲನ ವಾತ್ಸಲ್ಯ ಸಿಂಧು ಕೃತಿಯನ್ನು ಅನಾವರಣಗೊಳಿಸುವರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಕೃತಿ ಪರಿಚಯ ಮಾಡುವರು. ಸಾಹಿತಿ, ನಿವೃತ್ತ ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಅವರು ಕವನ ಸಂಕಲನ ಸುಪ್ತ ಸಿಂಚನ ಕೃತಿಯನ್ನು ಬಿಡುಗಡೆಗೊಳಿಸುವರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕೃತಿ ಪರಿಚಯ ಮಾಡುವರು. ಕವಯಿತ್ರಿ ಪರಿಣಿತ ರವಿ ಉಪಸ್ಥಿತರಿರುವರು. ಈ ಸಂದರ್ಭ ಸುಗಮ ಸಂಗೀತ ಗಾಯಕಿ ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ ಹಾಗೂ ತಂಡದವರಿಂದ ಕವನಗಳ ಗಾಯನ ನಡೆಯಲಿದೆ.
ಅಪರಾಹ್ನ 1.30 ರಿಂದ ಕವಿಗೋಷ್ಠಿ ನಡೆಯಲಿದ್ದು, ಚುಟುಕು ಸಾಹಿತಿ, ಶಿಕ್ಷಕ ಹರೀಶ್ ಸುಲಾಯ ಒಡ್ಡಂಬೆಟ್ಟು ಅಧ್ಯಕ್ಷತೆ ವಹಿಸುವರು.ಹಿರಿಯ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಉದ್ಘಾಟಿಸುವರು. ಬಳಿಕ ನಡೆಯುವ ಕವಿಗೋಷ್ಠಿಯಲ್ಲಿ ನಾರಾಯಣ ಭಟ್ ಹಿಳ್ಳೇಮನೆ, ಜಿ.ಕೆ.ರಾಜ್ ನಂದಾವರ, ವಿರಾಜ್ ಅಡೂರು, ರಾಘವೇಂದ್ರ ಕಾರಂತ್, ಶಾಂತಪ್ಪ ಬಾಬು, ದಯಾನಂದ ರೈ ಕಳ್ವಾಜೆ, ಸುಭಾಷ್ ಪೆರ್ಲ, ಪುರುಷೋತ್ತಮ ಭಟ್, ಮಣಿರಾಜ್ ವಾಂತಿಚ್ಚಾಲ್, ಅಶ್ವಿನಿ ಕೋಡಿಬೈಲ್, ಪ್ರಭಾವತಿ ಕೆದಿಲಾಯ, ಶ್ಯಾಮಲಾ ರವಿರಾಜ್, ಪ್ರಮೀಳಾ ರಾಜ್ ಸುಳ್ಯ, ಶಶಿಕಲಾ ಕುಂಬಳೆ, ಪ್ರೇಮಾ ಉದಯಕುಮಾರ್ ಸುಳ್ಯ, ಸುಶೀಲಾ ಪದ್ಯಾಣ, ವಿದ್ಯಾ ಗಣೇಶ್ ಅಣಂಗೂರು, ಜ್ಯೋಸ್ನ್ಸಾ ಎಂ.ಕಡಂದೇಲು, ಶ್ವೇತಾ ಕಜೆ, ಲತಾ ಆಚಾರ್ಯ ಬನಾರಿ ಸ್ವರಚಿತ ಕವನಗಳನ್ನು ವಾಚಿಸುವರು. ಜಯ ಮಣಿಯಂಪಾರೆ ಕವಿಗೋಷ್ಠಿ ನಿರ್ವಹಿಸುವರು.