ಪಾಕಿಸ್ತಾನ ಯಾವುದೇ ರೀತಿಯ ದುಃಸಾಹಸಕ್ಕೆ ಮುಂದಾದರೆ ಎದಿರೇಟು ನೀಡಲು ಸಿದ್ದ- ಸೇನಾ ಮುಖ್ಯಸ್ಥರ ಎಚ್ಚರಿಕೆ ದೇಶಕ್ಕೆ ಭದ್ರತೆ ಹಾಗೂ ನಾಗರಿಕರಿಗೆ ರಕ್ಷಣೆ ಒದಗಿಸಲು ದೃಢವಾದ ಕ್ರಮ
0
ಮಾರ್ಚ್ 01, 2019
ನವದೆಹಲಿ: ಪಾಕಿಸ್ತಾನ ಯಾವುದೇ ರೀತಿಯ ದುಸಾಹಸಕ್ಕೆ ಕೈ ಹಾಕಿದರೆ ಎದಿರೇಟು ನೀಡಲು ಭಾರತೀಯ ಸೇನೆ ಸಿದ್ಧವಿರುವುದಾಗಿ ಭೂ, ನೌಕಾ ಹಾಗೂ ವಾಯು ಸೇನೆಯ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಸಂಜೆ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ, ಸೇನಾ ಮೇಜರ್ ಜನರಲ್ ಸುರೇಂದ್ರ ಸಿಂಗ್ ಬೆಹಾಲ್ , ನೌಕ ಪಡೆಯ ಅಡ್ಮೀರಲ್ ಡಿಎಸ್ ಗುಜ್ರಾಲ್ , ವಾಯುಪಡೆಯ ಏರ್ ಮಾರ್ಷಲ್ ಆರ್ ಜಿಕೆ ಕಪೂರ್, ದೇಶಕ್ಕೆ ಭದ್ರತೆ ಹಾಗೂ ನಾಗರಿಕರಿಗೆ ರಕ್ಷಣೆ ಒದಗಿಸಲು ದೃಢವಾದ ಕ್ರಮ ಕೈಗೊಳ್ಳಲು ಸಿದ್ಧವಿರುವುದಾಗಿ ಘೋಷಿಸಿದರು.
ಪಾಕಿಸ್ತಾನದ ಎಫ್ -16 ಯುದ್ಧ ವಿಮಾನಗಳು ಭಾರತದತ್ತ ಬರುತ್ತಿರುವುದು ರಡಾರ್ ನಲ್ಲಿ ಪತ್ತೆಯಾಗಿತ್ತು. ನಮ್ಮ ನೆಲೆಗಳನ್ನು ಗುರಿಯಾಗಿ ದಾಳಿ ನಡೆಸಲು ಎಫ್ -16 ವಿಮಾನಗಳು ಬರುತ್ತಿರುವುದು ಪತ್ತೆಯಾಗಿದ್ದರಿಂದ ನಮ್ಮನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ದಾಳಿ ನಡೆಸಿ ಆ ವಿಮಾನವನ್ನು ಹೊಡೆದುರುಳಿಸಲಾಯಿತು ಎಂದು ತಿಳಿಸಿದರು.
ಈ ಕಾರ್ಯಾಚರಣೆ ವೇಳೆಯಲ್ಲಿ ನಮ್ಮ ಮಿಗ್ 21 ವಿಮಾನವನ್ನು ಕಳೆದುಕೊಂಡಿದ್ದೇವೆ.ದಾಳಿ ಬಗ್ಗೆ ಪಾಕಿಸ್ತಾನ ಹಲವು ಸುಳ್ಳು ಹೇಳಿಕೆಗಳನ್ನು ನೀಡಿತ್ತು. ಮೊದಲಿಗೆ ಮೂರು ಪೈಲಟ್ ಗಳಿದ್ದಾರೆ ಎಂದಿದ್ದ ಪಾಕಿಸ್ತಾನ ನಂತರ ಒಬ್ಬರು ಪೈಲಟ್ ಇದ್ದರೆಂದು ಹೇಳಿಕೆ ನೀಡಿತ್ತು ಎಂದು ಹೇಳಿದರು.
ಎಫ್-16 ವಿಮಾನಗಳು ಭಾರತದ ಗಡಿ ಪ್ರವೇಶಿಸಿರುವ ಬಗ್ಗೆ ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ. ಅದರ ಬಿಡಿ ಭಾಗಗಳನ್ನು ಭಾರತದ ಗಡಿಪ್ರದೇಶದೊಳಗೆ ವಶಪಡಿಸಿಕೊಂಡಿರುವುದಾಗಿ ಆರ್ ಜಿಕೆ ಕಪೂರ್ ಹೇಳಿದರು.
ಆದರೂ ಪಾಕಿಸ್ತಾನದ ಜೆಟ್ ಗಳು ಬಾಂಬ್ ಗಳನ್ನು ಹಾಕಿವೆ. ಆದರೆ, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಕಪೂರ್, ವಿಂಗ್ ಕಮಾಂಡರ್ ಅಭಿನಂದನ್ ನಾಳೆ ಸ್ವದೇಶಕ್ಕೆ ಮರಳುತ್ತಿರುವುದರಿಂದ ವಾಯುಪಡೆ ಸಂತಸವಾಗಿರುವುದಾಗಿ ಹೇಳಿದರು.
ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟವಾಗಿದ್ದು, ಪಾಕಿಸ್ತಾನ ಭಯೋತ್ಪಾದನೆಗೆ ನೆರವು ನೀಡುವುದನ್ನು ನಿಲ್ಲಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಸೇನಾ ಮೇಜರ್ ಜನರಲ್ ಸುರೇಂದ್ರ ಸಿಂಗ್ ಬೆಹಾಲ್ ಎಚ್ಚರಿಕೆ ನೀಡಿದರು.