ಏರ್ ಸ್ಟ್ರೈಕ್, ಉಗ್ರರ ಸಾವಿನ ಕುರಿತು ಸಾಕ್ಷಿ ಇದೆ, ಅವುಗಳ ಬಹಿರಂಗ ಸರ್ಕಾರಕ್ಕೆ ಬಿಟ್ಟಿದ್ದು: ವಾಯುಸೇನೆ ತಿರುಗೇಟು
0
ಮಾರ್ಚ್ 01, 2019
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಯುಸೇನೆ ನಡೆಸಿದ ದಾಳಿ ಮತ್ತು ಅವುಗಳಿಂದ ಉಂಟಾದ ಸಾವುನೋವುಗಳ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಖಡಕ್ ತಿರುಗೇಟು ನೀಡಿರುವ ವಾಯುಸೇನೆ ತಮ್ಮ ದಾಳಿಯ ಕುರಿತ ಸಾಕ್ಷ್ಯಾಧಾರಗಳು ತಮ್ಮ ಬಳಿ ಇದ್ದು, ಅವುಗಳ ಬಹಿರಂಗ ಸರ್ಕಾರ ಮತ್ತು ಸೇನಾ ಮುಖ್ಯಸ್ಥರಿಗೆ ಬಿಟ್ಟಿದ್ದು ಎಂದು ಹೇಳಿದೆ.
ಈ ಬಗ್ಗೆ ದೆಹಲಿಯಲ್ಲಿ ಗುರುವಾ ಸಂಜೆ ಜಂಟಿ ಸುದ್ದಿಗೋಷ್ಛಿ ವೇಳೆ ಮಾತನಾಡಿದ ವಾಯುಸೇನೆಯ ಏರ್ ವೈಸ್ ಮಾರ್ಷಲ್ ಆರ್ ಜಿಕೆ ಕಪೂರ್ ಅವರು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಯುಸೇನೆಯ ಜೆಟ್ ಗಳು ಬಾಂಬ್ ದಾಳಿ ನಡೆಸಿದ್ದು ನಿಜ. ಬಾಂಬ್ ದಾಳಿಯಿಂದಾಗಿ ಉಗ್ರರ ಅಡಗುದಾಣಗಳು, ಶಸ್ತ್ರಾಸ್ತ್ರಗಳ ಗೋದಾಮು ಮತ್ತು ಅಪಾರ ಪ್ರಮಾಣದ ಉಗ್ರರು ಹತರಾಗಿದ್ದಾರೆ. ಈ ಕುರಿತ ಎಲ್ಲ ಸಾಕ್ಷ್ಯಾಧಾರಗಳೂ ತಮ್ಮ ಬಳಿ ಇದ್ದು, ಇವುಗಳ ಬಹಿರಂಗ ಪಡಿಸುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ಜೊತೆಗೆ ಪಾಕ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂಬುದಕ್ಕೆ ಸಾಕ್ಷಿ ತೋರಿಸಿದ ವಾಯುಪಡೆಯ ಉಪ ಮುಖ್ಯಸ್ಥ ಕಪೂರ್ ಅವರು ಪಾಕ್ ಯುದ್ಧ ವಿಮಾನ ಎಫ್ 16 ಹೊತ್ತೊಯ್ಯುವ ಮರಾಮ್ ಕ್ಷಿಪ್ಪಣಿಯ ಒಂದು ಭಾಗವು ಪೂರ್ವ ರಜೌರಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿಸಿದರು. ಭಾರತದ ಭೂಪ್ರದೇಶದಲ್ಲೇ ಇದು ಕಂಡುಬಂದಿದೆ ಎಂದು ಸಾಕ್ಷಿ ಸಮೇತ ಪಾಕ್ ಗೆ ತಿರುಗೇಟು ನೀಡಿದರು.
'ನಮ್ಮ ಮಿಗ್-21 ಬೈಸನ್ ವಿಮಾನದ ಮೇಲೆ ನೆರೆ ರಾಷ್ಟ್ರ ಪಾಕ್?, ಎಫ್?-16 ವಿಮಾನದಿಂದ ದಾಳಿ ಮಾಡಿ, ನಮ್ಮ ಇಬ್ಬರು ಪೈಲಟ್ ಗಳನ್ನು ಹೊರಗೆಳೆದಿದ್ದಾರೆ. ಆದರೆ, ಪಾಕ್ ತನ್ನ ಕಾರ್ಯಾಚರಣೆಯಲ್ಲಿ ಎಫ್-16 ವಿಮಾನವನ್ನು ಬಳಸಿಲ್ಲ ಎಂದು ಸುಳ್ಳು ಹೇಳುತ್ತಿದೆ. ಆದರೆ, ರಜೌರಿಯಲ್ಲಿ ಸಿಕ್ಕಿರುವ ಪಾಕ್ ಸಹಿ ಇರುವ ಮರಾಮ್ ಭಾಗಗಳು ಪಾಕ್ ಸುಳ್ಳಿಗೆ ಸಾಕ್ಷಿಯಾಗಿದೆ ಎಂದು ಕಪೂರ್ ತಿಳಿಸಿದರು.
ಈ ಮಧ್ಯೆ, ವಾಯುಸೇನೆಯ ದಾಳಿಯನ್ನು ಪ್ರಶ್ನಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಭಾರತೀಯ ವಾಯುಪಡೆ ಪಾಕಿಸ್ತಾನದ ಒಳ ನುಗ್ಗಿ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿದ ನಂತರ ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆ ಸಹ ಕರೆದಿಲ್ಲ. ದಾಳಿಯ ಬಗ್ಗೆ ಯಾವುದೇ ಪಕ್ಷಕ್ಕೂ ಮಾಹಿತಿ ಇಲ್ಲ. ಆ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಮೋದಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.