ಕನ್ನಡ ಜನಪ್ರತಿನಿಧಿಗಳ ಸಮಾಲೋಚನಾ ಸಭೆ
0
ಮಾರ್ಚ್ 03, 2019
ಕುಂಬಳೆ: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡು-ಮಂಜೇಶ್ವರ ತಾಲೂಕು ವ್ಯಾಪ್ತಿಯ ಎಲ್ಲಾ ಸರಕಾರಿ, ಅರೆ ಸರಕಾರಿ, ಸ್ಥಳೀಯಾಡಳಿತೆ, ಸಹಕಾರಿ ಸಂಸ್ಥೆಗಳಲ್ಲಿ ರಾಜ್ಯದ ಮಲಯಾಳ ಭಾಷೆಯೊಂದಿಗೆ ದ್ವಿಭಾಷಾ ನೀತಿಯಂತೆ ಕನ್ನಡ ಭಾಷೆಯಲ್ಲಿಯೂ ವ್ಯವಹರಿಸುವ ರೀತಿಯಲ್ಲಿ ಸರಕಾರದ ಆದೇಶವಿದ್ದರೂ ಅದನ್ನು ಇಲ್ಲಿನ ಅಧಿಕಾರಿಗಳು ಪಾಲಿಸುತ್ತಿಲ್ಲವೆಂದು ಕನ್ನಡ ಹೋರಾಟ ಸಮಿತಿ ಆರೋಪಿಸಿದೆ.
ಈ ಬಗ್ಗೆ ಅದೆಷ್ಟೋ ಬಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ಕೊಟ್ಟಿದ್ದರೂ ಮತ್ತೆ ಅದೇ ವರ್ತನೆಯನ್ನು ಮುಂದುವರಿಸುತ್ತಿದ್ದಾರೆ.
ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ದ್ವಿಭಾಷಾ ನೀತಿಯ ಪ್ರಕಾರ ಎಲ್ಲಾ ಮಾಹಿತಿಗಳನ್ನು ಕನ್ನಡದಲ್ಲಿಯೂ ನೀಡುವುದರೊಂದಿಗೆ ನಮ್ಮ ಮೂಲಭೂತ ಹಕ್ಕುಗಳನ್ನು ಪಡೆಯಬೇಕಾದ ತುರ್ತು ಕೆಲಸ ಆಗಬೇಕಿದೆ. ಎರಡು ತಾಲೂಕಿನ ಗ್ರಾಮ ಪಂಚಾಯತಿ, ಬ್ಲಾಕ್ ಪಂಚಾಯತಿ ಹಾಗು ಕಾಸರಗೋಡು ಜಿಲ್ಲಾ ಪಂಚಾಯತಿ, ನಗರಸಭೆಯ ವಿವಿಧ ರಾಜಕೀಯ ಪಕ್ಷಗಳ ಕನ್ನಡ ಜನಪ್ರತಿನಿಧಿಗಳ ಸಮಾಲೋಚನಾ ಸಭೆ ಭಾನುವಾರ ಕುಂಬಳೆ ಸಿಂಡಿಕೇಟ್ ಬ್ಯಾಂಕ್ ಮಹಡಿಯ ಮಾಧವ ಪೈ ಹಾಲ್‍ನಲ್ಲಿ ನಡೆಯಿತು.
ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕುರಾಯ ಅಧ್ಯಕ್ಷತೆ ವಬಹಿಸಿದ್ದರು. ಉಪಾಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ತ್ರಿಸ್ಥರ ಪಂಚಾಯತುಗಳ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಕೃಷಿಕರು, ವ್ಯಾಪಾರಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ.ಕಾಸರಗೋಡು ಸ್ವಾಗತಿಸಿ, ನಿರೂಪಿಸಿದರು. ಸತೀಶ ಮಾಸ್ತರ್ ಕೂಡ್ಲು ವಂದಿಸಿದರು.