HEALTH TIPS

ಸಮಸ್ತ ಸಮರಸ ಓದುಗರಿಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳೊಂದಿಗೆ,

ಭಾರತೀಯರ ಪ್ರಮುಖ ಹಬ್ಬಗಳಲ್ಲೊಂದು ಮಹಾಶಿವರಾತ್ರಿ. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ. ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ,4 ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ.ಇದರ ಮುಂದಿನ ದಿನ ವಿವಿಧ ರೀತಿಯ ಸಿಹಿ ತಿನಿಸುಗಳನ್ನು ತಯಾರಿಸುವರು. ಶಿವರಾತ್ರಿ, ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಭೋ ಶಂಕರನನ್ನು ನೆನೆದು, ಪುನೀತರಾಗುತ್ತಾರೆ. ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನಿಗೆ ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ. ಇಡೀ ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲೂ ಆಚರಿಸುವ ಹಬ್ಬ ಇದು. ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ. ಶಿವಪುರಾಣದಲ್ಲಿ ಶಿವಾರಾತ್ರಿಯ ಆಚರಣೆ ಬಂದಿರುವ ಬಗ್ಗೆ ಒಂದು ಸಣ್ಣ ಕಥೆ ಇದೆ.... ದೇವಲೋಕದಲ್ಲಿ ಒಮ್ಮೆ ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿದ್ದವು. ಮಹಾ ದೇವತೆಗಳಿಬ್ಬರನ್ನೂ ಸಮಾಧಾನ ಮಾಡುವುದು ದುರ್ಲಭ ಎನಿಸಿದಾಗ, ದೇವತೆಗಳೆಲ್ಲ ಹೋಗಿ ಪರಶಿವನನ್ನು ಬೇಡಿಕೊಳ್ಳುತ್ತಾರೆ. ವಿಷ್ಣು ಹಾಗೂ ಬ್ರಹ್ಮರ ಜಗಳವನ್ನು ಶಮನ ಮಾಡುವಂತೆ ಕೋರಿಕೊಳ್ಳುತ್ತಾರೆ. ಆಗ ವಿಷ್ಣು ಮತ್ತು ಬ್ರಹ್ಮರ ನಡುವೆ ಶಿವ, ಅಗ್ನಿಕಂಭದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಕಂಡುಹಿಡಿಯಲು ಸೂಚಿಸುತ್ತಾನೆ. ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ. ಎಷ್ಟೇ ಮುಂದೆ ಸಾಗಿದರೂ ಬ್ರಹ್ಮ ಹಾಗೂ ವಿಷ್ಣು ಇವರಿಬ್ಬರಿಗೂ ಕಂಭದ ಅಂತ್ಯವೇ ಕಾಣುವುದಿಲ್ಲ. ಅನಂತವಾಗಿರುವ ಶಿವನ ಶಕ್ತಿಯನ್ನು ನೋಡಿದ ವಿಷ್ಣು ಹಾಗೂ ಬ್ರಹ್ಮರಿಗೆ ಸತ್ಯದ ಅರಿವಾಗುತ್ತದೆ. ಆದರೆ ಶಿವನ ಜಡೆಯಿಂದ ಕೆಳಗೆ ಬೀಳುತ್ತಿದ್ದ ಕೇತಕಿ ಪುಷ್ಫದ ಬಳಿ ಬ್ರಹ್ಮ , ನೀನು ಎಲ್ಲಿಂದ ಬೀಳುತ್ತಿದ್ದೀಯ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪವು ನಾನು ಅಗ್ನಿ ಕಂಭದ ಶಿರದಿಂದ ಬೀಳುತ್ತಿದ್ದೇನೆ ಎಂಬ ಉತ್ತರ ನೀಡುತ್ತದೆ. ಆಗ ಬ್ರಹ್ಮ ಶಿವನಲ್ಲಿಗೆ ಬಂದು ಕೇತಕಿ ಪುಪ್ಪವನ್ನು ತೋರಿಸಿ, ತಾನು ಅಗ್ನಿ ಕಂಭದ ಶಿರಭಾಗವನ್ನು ನೋಡಿರುವುದಾಗಿಯೂ ಅಲ್ಲಿಂದಲೇ ಕೇತಕಿ ಪುಷ್ಪವನ್ನು ತಂದಿರುವುದಾಗಿಯೂ ಹೇಳುತ್ತಾನೆ. ಇವರಿಬ್ಬರ ಮೋಸವನ್ನು ಅರಿತ ಶಿವ, ಬ್ರಹ್ಮನನ್ನು ಯಾರೂ ಪೂಜಿಸಕೂಡದು ಎಂದು ಶಾಪ ನೀಡಿ ಲಿಂಗರೂಪ ತಾಳುತ್ತಾನೆ. ಅಂದು ಮಾಘ ಮಾಸದ ಬಹುಳ ಚತುರ್ದಶಿಯಾಗಿರುತ್ತದೆ. ಹೀಗಾಗಿ, ಶಿವ ಲಿಂಗರೂಪ ತಾಳಿದ ಮಾಘ ಮಾಸದ ಬಹುಳ ಚತುರ್ದಶಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬ ನಂಬಿಕೆ ಇದೆ. ಶಿವನಿಗೆ ಅತೀ ಶ್ರೇಷ್ಠವಾಗಿರುವ ಬಿಲ್ವ ಪತ್ರೆಯನ್ನು ಅರ್ಪಿಸಿ, ತಿಲಗಿ ಪುಷ್ಪ, ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಶಿವನ್ನು ಭಜಿಸಿದರೆ, ಪಾಪಗಳು ಪರಿಹಾರವಾಗುತ್ತವೆ, ಮೋಡಗಳೇ ಇಲ್ಲದ ಶುಭ್ರ ಆಕಾಶದಲ್ಲಿ ಬಂದಿರುವ ಚಂದ್ರನ ಬೆಳಕಿನಲ್ಲಿ ಶಿವನಿಗೆ ಅಭಿಷೇಕ ಮಾಡಿ ಆರಾಧಿಸಿದರೆ ಅತ್ಯಂತ್ರ ಶ್ರೇಷ್ಠ ಎಂಬ ನಂಬಿಕೆಗಳಿವೆ. ಶಿವರಾತ್ರಿಯ ದಿನವಿಡೀ ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನನ್ನು ಆರಾಧಿಸಿದರೆ ಸಕಲ ಪಾಪಗಳೂ ಕಳೆಯುತ್ತವೆ ಎಂದು ನಂಬಲಾಗಿದೆ. ಎಲ್ಲಾ ಜೀವರಾಶಿಗಳನ್ನು ಪೊರೆಯುವ ಶಿವ ಎಲ್ಲಾ ಆಡಂಬರಗಳಿಂದ ಮುಕ್ತ. ಆತ ಆಭರಣಪ್ರಿಯನಲ್ಲ, ಅಲಂಕಾರ ಪ್ರಿಯನೂ ಅಲ್ಲ. ಭಸ್ಮವನ್ನು ಬಳಿದುಕೊಂಡು, ಹುಲಿಯ ಚರ್ಮವನ್ನು ಉಟ್ಟು, ಸ್ಮಶಾನದಲ್ಲಿರುವ ಸರಳ ಮತ್ತು ಅಮೋಘ ಶಕ್ತಿ. ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ. ಎಲ್ಲ ಆಡಂಬರಗಳಿಂದ ಮುಕ್ತರಾಗಿ, ಸರಳ ಮನಸ್ಸಿನಿಂದ ಪರಶಿವನನ್ನು ನೆನದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ... ಸರಳತೆ, ಪ್ರಾಮಾಣಿಕತೆ, ಸತ್ಯ ಮತ್ತು ಶಕ್ತಿಯ ದೇವತೆ ಈಶ್ವರ ಲೋಕದಲ್ಲಿರುವ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಲಿ ಎಂಬುದು ಎಲ್ಲರ ಕೋರಿಕೆ.. ಎಲ್ಲರಿಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಮಹಾ ಶಿವರಾತ್ರಿ, ರುದ್ರನ ಮಂಗಳಕರ ರಾತ್ರಿ: ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ವೇಳೆ ಜಾಗರಣೆ ಮಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರವಾಗುವ ಶುಭ ದಿನ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು. ಶಿವರಾತ್ರಿಯ ಮಹಿಮೆ: ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ. ಬೇಡನ ಶಿವಭಕ್ತಿ: ಶಿವರಾತ್ರಿ ಆಚರಣೆಯ ಕುರಿತಾಗಿ ಪ್ರಚಲಿತದಲ್ಲಿರುವ ಕಥೆಯಿದು. ಹಿಂದೆ ಬೇಡನೊಬ್ಬ ಕಾಡಿನಲ್ಲಿ ಬೇಟೆಗಾಗಿ ತೆರಳಿದ್ದ. ದಿನವಿಡಿ ಅಲೆದರೂ ಆತನಿಗೆ ಯಾವುದೇ ಬೇಟೆ ಸಿಗಲಿಲ್ಲ. ಬೇಟೆ ಅರಸಿ ಹೊರಟ ಬೇಡ ದಾರಿ ತಪ್ಪಿ ಅರಣ್ಯದಲ್ಲೇ ಅಲೆಯತೊಡಗಿದ. ಅದಾಗಲೇ ಸಂಜೆಯಾಗಿತ್ತು. ಕ್ರೂರ ಪ್ರಾಣಿಗಳು ಆತನನ್ನು ಸುತ್ತುವರಿಯತೊಡಗಿದವು. ಭಯಗ್ರಸ್ತನಾದ ಬೇಡ ಮರವೇರಿದ. ಮನದಲ್ಲೇ ಶಿವನನ್ನು ಧ್ಯಾನಿಸುತ್ತಾ ಮರದ ಎಲೆಗಳನ್ನು ಕಿತ್ತು ಕೆಳಗಡೆ ಹಾಕತೊಡಗಿದ. ಆ ಎಲೆಗಳು ಅವನಿಗರಿವಿಲ್ಲದಂತೆಯೇ ಕೆಳಗಡೆಯಿದ್ದ ಶಿವಲಿಂಗದ ಮೇಲೆ ಬೀಳತೊಡಗಿದವು. ಕಾಕತಾಳೀಯವೆಂದರೆ ಆತ ಏರಿದ್ದ ಮರ ಬಿಲ್ವಮರವಾಗಿತ್ತು. ಶಿವರಾತ್ರಿಯಂದು ಪೂರ್ತಿ ಜಾಗರಣೆಯಿದ್ದು, ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದ ಬೇಡನಿಗೆ ಶಿವ ಅಭಯ ನೀಡಿದ. ಶಿವನೇ ಆತನನ್ನು ರಕ್ಷಿಸಿದ ಎಂಬ ಸುದ್ದಿ ಹರಡಿ ಭಕ್ತರು ಶಿವರಾತ್ರಿಯಂದು ಶಿವನನ್ನು ಪೂಜಿಸಲು ಆರಂಭಿಸಿದರು. ಪುಣ್ಯದ ಲವಾಗಿ ಬೇಡ ಮುಂದಿನ ಜನ್ಮದಲ್ಲಿ ರಾಜಾ ಚಿತ್ರಭಾನುವಾಗಿ ಜನಿಸಿದ ಎಂಬುದು ಕಥೆ. ಮಹಾಭಾರತದಲ್ಲಿ ಬರುವ ಈ ಕಥೆಯನ್ನು ಮರಣಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಹೇಳಿದನೆಂಬುದು ಪ್ರತೀತಿ. ಶಿವರಾತ್ರಿ ಆಚರಣೆ ಹಿನ್ನೆಲೆ: 1. ಪ್ರತಿ ಸಂವತ್ಸರದಲ್ಲಿ.. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು... ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬರುತ್ತಾನೆ.. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣ ಗೊಳ್ಳುತ್ತಾನೆ.. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿ ರಾತ್ರಿ ವೇಳೆಯಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಯೂ ಇದೆ. 2. ಸ್ಕಂದ ಪುರಾಣ ದಲ್ಲಿ ಶಿವರಾತ್ರಿ ಹಬ್ಬದ ಬಗ್ಗೆ ಉಲ್ಲೇಖವಿದೆ.. ಶಿವರಾತ್ರಿಯು ಸಮಯ ಪೂಜೆಗೆ ಬಹು ಪ್ರಾಶಸ್ತ್ಯವಾದ ಸಮಯ... ಆ ದಿನ ರಾತ್ರಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶ, ಮಂಗಳಕರ ನಾದ ಶುಭ್ರ ಚಂದ್ರ ಸ್ಪೂರ್ತಿ ಹುಟ್ಟಿಸುವ ಸಂವೇದನಾಶೀಲ ವಾತಾವರಣವನ್ನು ಕಾಣಬಹುದು.. ಈ ಪರ್ವಕಾಲವು ಪೂಜೆಗೆ ಪ್ರಶಸ್ತವಾದ ಕಾಲವಾಗಿದ್ದು ಶಿವನ ಆರಾಧನೆ ಮಾಡಿದರೆ ಪಾಪ ಕರ್ಮಗಳನ್ನು ಕಳೆಯುತ್ತಾನೆ ಎಂಬ ಪ್ರತೀತಿ ಇದೆ. 3. ತ್ರಯೋದಶಿಯು ಶಕ್ತಿರೂಪವಾದರೆ,, ಚತುರ್ದಶಿಯು ಶಿವರೂಪ. ತ್ರಯೋದಶಿಯು ಚತುರ್ದಶಿಯಲ್ಲಿ ಅಂತರ್ಗತ ವಾಗಿದ್ದರೆ ಅದು ಶಿವಶಕ್ತಿಯೋಗ ವಾಗುತ್ತದೆ. ಅದೆ ಶಿವರಾತ್ರಿಯ ಸಮಯವೆಂದು ಉಕ್ತಿಯೊಂದರಲ್ಲಿ ಉಲ್ಲೇಖವಿದೆ. ಈ ಶುಭ ಪುಣ್ಯದಿನದಂದು ಬ್ರಹ್ಮ ವಿಷ್ಣು ಆದಿಯಾಗಿ ಶಿವನನ್ನು ಪೂಜಿಸಿದ್ದು ಶಿವನೆ ತನಗೆ ಶಿವರಾತ್ರಿ ಪ್ರಿಯವಾದ ದಿನವೆಂದು ಹೇಳಿರುವನೆಂದು ಪ್ರತೀತಿ ಇದೆ. 4. 'ಶಿವ ಪುರಾಣ ' ದಲ್ಲಿ ಬರುವ ಬೇಡರ ಕಣ್ಣಪ್ಪನ ಕಥೆ....., ' ಸ್ಕಂದ ಪುರಾಣ 'ದ ಬೇಡ ಚಂದನನ ಕಥೆ..., ' ಗರುಡ ಮತ್ತು ಅಗ್ನಿ ಪುರಾಣ ' ಗಳ ಬೇಡ ಸುಂದರ ಸೇನನ ಕಥೆ... ಈ ಎಲ್ಲ ಕಥೆಗಳಲ್ಲೂ ಒಂದು ವಿಶೆಷವಾದ ಸಾಮ್ಯತೆಯನ್ನು ಕಾಣಬಹುದು.. ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ ಬಿಲ್ವ ಪತ್ರೆಗಳನ್ನು ಅರ್ಪಿಸಿದ್ದರಿಂದ ಅವರೆಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು. ಇದು ಶಿವರಾತ್ರಿ ಪೂಜೆಯ ಫಲದ ಮಹಿಮೆಯನ್ನು ಎತ್ತಿ ತೋರಿಸುತ್ತದೆ. 5. ದೇವತೆಗಳು ಮತ್ತು ಅಸುರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡ್ತಿರಬೇಕಾದ್ರೆ ಮೊದ್ಲು ಮಡಿಕೆ ತುಂಬ ಹಾಲಾಹಲ ಉತ್ಪತ್ತಿಯಾಯಿತು.. ಆದ್ರೆ ದೇವತೆಗಳು... ಅಸುರರು ಯಾರೂ ಆ ಹಾಲಾಹಲವನ್ನು ಕುಡಿಯೋಕೆ ಮುಂದಗಲಿಲ್ಲ.. ಆ ಹಾಲಾಹಲ ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮಥ್ರ್ಯವನ್ನು ಹೊಂದಿತ್ತು.. ಹೀಗಾಗಿ ಲೋಕ ಕಲ್ಯಾಣಕ್ಕಾಗಿ ಪರಶಿವನೇ ಆ ಹಾಲಾಹಲವನ್ನು ಕುಡಿದುಬಿಟ್ಟ.. ಅದೇ ಸಮಯಕ್ಕೆ ಪತ್ನಿ ಪಾರ್ವತಿ ದೇವಿ ಬಂದು ಆ ವಿಷ ಶಿವನ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿದಳು... ವ್ಯಕ್ತಿಗಳು ನಿದ್ರಿಸುತ್ತಿದ್ದರೆ ವಿಷವು ಬೇಗನೆ ದೇಹದ ತುಂಬ ಹರಡುತ್ತದೆ.. ಹೀಗಾಗಿ ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಶಿವನನ್ನು ಎಚ್ಚರವಿರಿಸಿದರು.. ಹೀಗಾಗಿ ಈ ಪವಿತ್ರ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ. ಮಹಾಶಿವರಾತ್ರಿಯ ಉಪವಾಸ ಮತ್ತು ಜಾಗರಣೆಯ ಮಹತ್ವ 1. ಶಿವನನ್ನು ಪೂಜಿಸುವುದರಿಂದ ಕರುಣಾಮಯಿಯಾದ ಶಿವನು ಸರ್ವರನ್ನು ಅನುಗ್ರಹಿಸುತ್ತಾನೆ ಎಂಬ ಪ್ರತೀತಿ ಇದೆ.. ಬೇಡರ ಕಣ್ಣಪ್ಪನು ಶಿವನನ್ನು ಪೂಜಿಸಿದ್ದರಿಂದ ಅವನನ್ನು ನುಗ್ರಹಿಸಿ ಮುಕ್ತಿ ಮಾರ್ಗ ತೋರಿಸಿದನು.. ' ಸ್ಕಂದ ಪುರಾಣ 'ದ ಪ್ರಕಾರ ಬೇಡ ಚಂದನನಿಗೂ ಶಿವನು ಅನುಗ್ರ ನೀಡಿದ್ದಾನೆ... ' ಗರುಡ ಮತ್ತು ಅಗ್ನಿ ಪುರಾಣ ' ಗಳಲ್ಲಿ ಉಲ್ಲೇಖವಿರುವಂತೆ, ಬೇಡ ಸುಂದರ ಸೇನನಿಗೂ ಶಿವನು ಆಶೀರ್ವಾದಿಸಿದ್ದಾನೆ.. ಹೀಗಾಗಿ ಮಹಾ ಶಿವರಾತ್ರಿಯಂದು ಉಪವಾಸ ಮಾಡಿ ಶಿವನಿಗೆ ಅಭಿಷೇಕ ಮಾಡಿ, ಬಿಲ್ವ ಪತ್ರೆಗಳನ್ನು ಅರ್ಪಿಸುವುದರಿಂದ ಎಲ್ಲರಿಗೂ ಸದ್ಗತಿ ಪ್ರಾಪ್ತವಾಯಿತು. 2. ಪ್ರತಿ ವರ್ಷದ ಶಿವರಾತ್ರಿಯ ಸಮಯದಲ್ಲಿ ಶಿವನು, ಪಾರ್ವತಿಯ ಜೊತೆಯಲ್ಲಿ ಭೂಮಿಗೆ ಆಗಮಿಸುತ್ತಾನೆ.. ಭೂ-ಸಂಚಾರ ಮಾಡುತ್ತಾನೆ.. ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ.. ಹೀಗಾಗಿ ಶಿವರಾತ್ರಿಯ ಶಿವನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿ ಇದೆ. 3. ಮದುವೆಯಾಗದ ಹೆಣ್ಣುಮಕ್ಕಳು ಶಿವಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಸಂಪ್ರದಾಯ. ಶಿವರಾತ್ರಿಯಂದು ಶಿವನನ್ನು ಪೂಜಿಸಿದರೆ, ಸುಖ, ಶಾಂತಿ, ಸಮೃದ್ಧಿ ದೊರೆಯುವುದೆಂಬ ನಂಬಿಕೆ ಆಸ್ತಿಕರದು. 4. ಕರುಣಾಮಯಿಯಾದ ಶಿವನನ್ನು ಭಕ್ತಿ ಪೂರಕವಾಗಿ ಯಾರೇ ಪೂಜಿಸಿದರೂ ಅವರನ್ನು ಅನುಗ್ರಹಿಸುತ್ತಾನೆ.. ಹಿಂದು ಮುಂದು ನೋಡದೇ ಅವರಿಗೆ ಬೇಡಿದ ವರಗಳನ್ನು ನೀಡುತ್ತಾನೆ.. ಭಕ್ತಿಗೆ ಮರುಳಾಗುವ ಶಿವನು ಹೀಗೆ ತನ್ನ ಭಕ್ತರಿಗೆ ಬೇಡಿದ ವರವನ್ನು ನೀಡುವುದರ ಮೂಲಕ ಎಷ್ಟೋ ಸಲ ಸಂಕಟಕ್ಕೆ ಸಿಲುಕಿದ್ದೂ ಇದೆ.. ಆದರೆ ಎಂಥದ್ದೇ ಸಂಕಟವಿದ್ದರೂ ಶಿವನು ಭಕ್ತರನ್ನು ಸದಾ ಅನುಗ್ರಹಿಸುತ್ತಲೇ ಇರುತ್ತಾನೆ.. ಅದಕ್ಕೆ “ಶಿವ ಭಕ್ತನಿಗೆ ನರಕಾ ಇಲ್ಲ” ಅನ್ನೋ ಮಾತಿದೆ. 5. ಶಿವರಾತ್ರಿಯ ಮತ್ತೊಂದು ವಿಶೆಷವೆಂದರೆ, ಶಿವನು ಪಾರ್ವತಿ ಹಿಮವಂತನ ಮಗಳಾದ ಗಿರಿಜೆಯನ್ನು ಅಂದರೆ ಪಾರ್ವತಿ ದೇವಿಯನ್ನು ವಿವಹವಾಗಿದ್ದು ಶಿವರಾತ್ರಿಯ ದಿನವೇ.. ಪಾರ್ವತಿ ದೇವಿಯು ಶಿವರಾತ್ರಿಯ ಸಮಯದಲ್ಲಿ ಶಿವನನ್ನು ಪ್ರಾರ್ಥಿಸಿ..ಶಿವನ ಜಪ ಮಾಡಿ ಶಿವನನ್ನು ವಲಿಸಿಕೊಂಡು ವಿವಾಹಳಾದಳು... ಅಷ್ಟೇ ಅಲ್ಲ, ಶಿವನು ಸಮುದ್ರ ಮಂಥನದಿಂದ ಉದ್ಭವಿಸಿದ ವಿಷವನ್ನು ಸೇವಿಸಿ, ಜಗತ್ತನ್ನು ವಿನಾಶದಿಂದ ಪಾರು ಮಾಡಿದ್ದು ಕೂಡ ಇದೇ ಸಮಯದಲ್ಲಿ.. ಹೀಗೆ ಹಿಂದೂ ಪುರಾಣಗಳಲ್ಲಿ ಶಿವರಾತ್ರಿಗೆ ಮಹತ್ವದ ಹಿನ್ನೆಲೆ ಇದೆ.. ವೈಜ್ಞಾನಿಕವಾಗಿ ಶಿವರಾತ್ರಿಯ ಆಚರಣೆ: ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ಈ ನಮ್ಮ ದೇಹ ಹೊಂದಿಕೊಳ್ಳ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಬಹು ಮುಖ್ಯ. ಈ ಸಮಯದಲ್ಲಿ ಛಳಿಗಾಲವು ಮುಗಿದು ಬೇಸಗೆಕಾಲವು ಪ್ರಾರಂಭಗೊಳ್ಳುವುದು. ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು ಅಂದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ (ನೆಗಡಿ, ಕೆಮ್ಮು, ಶೀತ ಮತ್ತಿತರೆ) ಬರುವುದು. ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ. ಅಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ. ಬಿಲ್ವ ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು. ಬಿಲ್ವವನ್ನು ಮೂಸಿ ಎಸೆಯುವುದು ಸರಿಯಾದ ವಿಧಾನ. ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ. ಪೂಜಿಸುವ ದೇಗುಲವನ್ನು ವಾಸ್ತುವಿನ ಪ್ರಕಾರ ಕಟ್ಟಿರುತ್ತಾರೆ. ಈ ಕ್ಷೇತ್ರದಲ್ಲಿ ಹೆಚ್ಚಿನ ಗುರುತ್ವಾಕರ್ಷಣವಿದ್ದು ಅದನ್ನು ಶಿವ ಶಕ್ತಿಯೆಂದೂ ಕರೆಯುವರು. ಇಲ್ಲಿ ಮಂತ್ರಗಳನ್ನು ಪಠಿಸುತ್ತಾ ವಿಶಿಷ್ಟ ಕಲ್ಲಿನಿಂದ ಕೆತ್ತಿರುವ ಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದರಿಂದ ಸುತ್ತ ಮುತ್ತಲಿಗೆಲ್ಲಾ ಹೆಚ್ಚಿನ ಶಕ್ತಿ ಬರುವುದೆಂಬ ನಂಬಿಕೆ ಇದೆ. ಈ ಹಿಂದೆ ನಾನು ಬರೆದ ಪೂಜಾವಿಧಾನದಂತೆ ಷೋಡಶಾಂಗ ಪೂಜೆ ಮಾಡುವುದು ವಾಡಿಕೆ. ವೇದೋಕ್ತ ಪೂಜೆ ಮತ್ತು ಆಚರಣೆ ಬಿಲ್ವದ ಎಲೆ ಹೃದಯವನ್ನು ಹೋಲುತ್ತದೆ ಮತ್ತು ಲಿಂಗ ಪರಮಾತ್ಮನ ಪ್ರತೀಕ. ಆದ್ದರಿಂದ ಇವೆರಡರ ಜೊತೆಗೂಡಿಕೆ ಆತ್ಮ ಪರಮಾತ್ಮಗಳ ಮಿಲನ. ರಾತ್ರಿಯು ಅಜ್ಞಾನದ ಸಂಕೇತ ಮತ್ತು ಆ ವೇಳೆಯಲ್ಲಿ ನಿದ್ರೆ ಮಾಡದೇ ಎಚ್ಚರವಾಗಿರುವುದು ತಿಳುವಳಿಕೆಯ ಕಡೆಗೆ ಹೋಗುತ್ತಿರುವ ಸಂಕೇತ. ಹೀಗೆ ಶಿವರಾತ್ರಿಯ ರಾತ್ರಿ ಜಾಗರಣೆ ಮಾಡುವುದು ಮೋಕ್ಷದ ಕಡೆಗೆ ಹೊಗುವುದು ಎಂದು ತತ್ವಗಳು ತಿಳಿಸುತ್ತವೆ. ಉಪವಾಸ ಮಾಡುವುದು ಎಂದರೆ, ದೇವರಿಗೆ ಹತ್ತಿರವಾಗಿರುವುದು/ದೇವರ ಬಗ್ಗೆ ಚಿಂತಿಸುತ್ತಿರುವುದು ಎಂದು ಅರ್ಥ. ಹೀಗೆ ಆತನ ಧ್ಯಾನದಲ್ಲಿ ಇರುವಾಗ ಊಟ/ತಿಂಡಿಯ ಕಡೆ ಗಮನ ಹೋಗುವುದಿಲ್ಲ. ಜಾಗರಣೆ ಎಂದರೆ, ಜಾಗೃತರಾಗಿರೋದು ಎಂದು. ರಾತ್ರಿಯಲ್ಲಿ ಜಾಗರಣೆ ಮಾಡುವುದರ ಅರ್ಥವೇನು? ರಾತ್ರಿ ಎನ್ನುವುದು ತಮೋ ಗುಣದ ಪ್ರತೀಕ. ಆಲಸ್ಯ, ನಿದ್ರೆ, ಅಹಂಕಾರ, ಅಜ್ಞಾನಗಳ ದ್ಯೋತಕ ನಿಶೆ. ಆ ಸಮಯದಲ್ಲಿ ಜಾಗೃತರಾಗಿರಬೆಕು ಎಂದರೆ, ಅವುಗಳಿಂದ ಜಾಗೃತರಾಗಿರಬೇಕು ಎಂಬರ್ಥ. ಹಾಗೆ ಜಾಗೃತರಾಗಿರುವುದಕ್ಕೆ ನಮಗೆ ಸಹಾಯವನ್ನು ಮಾಡುವವನು ದೇವರು. ಆ ದೇವರನ್ನು ಸ್ಮರಿಸುತ್ತ ಈ ತಮೋ ಗುಣಗಳಿಂದ ಜಾಗೃತರಾಗಿರಬೇಕು ಎನ್ನುವುದರ ಪ್ರತೀಕ ಶಿವರಾತ್ರಿಯ ಜಾಗರಣೆ. ಬೆಳಿಗ್ಗೆ ಬೇಗ ಎದ್ದು ಅಭ್ಯಂಜನ ಮಾಡಿ ಶಿವನಿಗೆ ಅಭಿಷೇಕ ಮಾಡುವುದು ರೂಢಿ. ಇಲ್ಲಿ ದಿನವನ್ನು ಮೂರು ಭಾಗಗಳನ್ನಾಗಿ ಮಾಡಿ ರುದ್ರಾಭಿಷೇಕಯುಕ್ತ ಪೂಜೆಯನ್ನು ಮಾಡುವುದು ವಾಡಿಕೆ. ರುದ್ರ ನಮಕ ಚಮಕಗಳನ್ನು ಉಚ್ಚರಿಸುವುದರಿಂದ ಉಸಿರಾಟಕ್ಕೂ ಹೆಚ್ಚಿನ ಶಕ್ತಿ ಬರುವುದು ಮತ್ತು ಬಾಯಿಯಿಂದ ಹೊರ ಹೊಮ್ಮುವ ತರಂಗಗಳಿಂದ ಸುತ್ತ ಮುತ್ತಲಿನ ಪರಿಸರ ಶಕ್ತಿಯುತವಾಗುವುದು. ಮೊದಲಿಗೆ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕವನ್ನೂ ಮಾಡುವರು. ಇದಕ್ಕೆಂದೇ ಮಹಾನ್ಯಾಸವೆಂಬ ಪ್ರಕಾರವಿದೆ. ನಂತರ ನೀರಿನ ಅಭಿಷೇಕವನ್ನು ನಿರಂತರವಾಗಿ ಮಾಡುವರು. ಅಭಿಷೇಕ್ಕಾಗಿಯೇ ಪ್ರತ್ಯೇಕವಾದ ಪಾತ್ರೆ ಇರುವುದು. ಅದರ ತಳಭಾಗದಲ್ಲಿ ರಂದ್ರವಿದ್ದು ಅದನ್ನು ಲಿಂಗದ ಮೇಲೆ ತೂಗು ಬಿಟ್ಟಿರುವರು. ಅದರೊಳಗೆ ನೀರು ತುಂಬಿಸಿದರೆ, ಸಣ್ಣದಾಗಿ ನೀರು ಲಿಂಗದ ಮೇಲೆ ಬೀಳುವುದು. ಕೃಷ್ಣ ಯಜುರ್ವೇದದ ಪ್ರಕಾರವಾದ ರುದ್ರ ನಮಕ ಮತ್ತು ಚಮಕಗಳನ್ನು ಅಭಿಷೇಕದ ಸಂದರ್ಭದಲ್ಲಿ ಪಠಿಸುತ್ತಾರೆ. ಹನ್ನೊಂದು ಬಾರಿ ನಮಕ ಚಮಕಗಳನ್ನು ಹನ್ನೊಂದು ಜನ ಋತ್ವಿಕರು ಪಠಣ ಮಾಡುವುದಕ್ಕೆ ಏಕಾದಶವಾರ ರುದ್ರಾಭಿಷೇಕ ಎಂದು ಕರೆಯುವರು. ಮೊದಲಿಗೆ ಚಮಕದ ಮೂರನೆಯ ಭಾಗವನ್ನು ಉಚ್ಚರಿಸಿ, ನಂತರ ಒಂದು ನಮಕದ ಭಾಗವನ್ನೂ ನಂತರ ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ತದನಂತರ ಎರಡನೆಯ ನಮಕದ ಭಾಗವನ್ನೂ ಮತ್ತು ಹನ್ನೊಂದು ಚಮಕ ಭಾಗಗಳನ್ನೂ ಪಠಿಸುವರು. ಹೀಗೆ ನಮಕಗಳ ಹನ್ನೊಂದೂ ಭಾಗವನ್ನು ಪಠಿಸಿ ಅಭಿಷೇಕ ಮಾಡುವರು. ಇದಕ್ಕೆ ಒಂದು ರುದ್ರವೆಂದು ಕರೆಯುವರು. ಬೆಳಗ್ಗೆ, ಸಂಜೆ ಮತ್ತು ರಾತ್ರೆ ಹೀಗೆ 24 ಘಂಟೆಗಳು ಭಗವನ್ನಾಮಸ್ಮರಣೆ ಮಾಡುತ್ತಾ ಜಾಗರಣೆ ಮಾಡುವುದು ಪರಿಪಾಠ. ಅಂದು ಊಟ ಮಾಡದೆ ಅಲ್ಪಾಹಾರ ಸೇವನೆ ಮಾಡುವರು. ಜಾಗರಣೆ, ಹಬ್ಬದ ವಿಶೇಷ ಆಚರಣೆ: ಕಾಶಿ ವಿಶ್ವನಾಥ, ಗೋಕರ್ಣದ ಮಹಾಬಲೇಶ್ವರ, ರಾಮೇಶ್ವರದ ರಾಮೇಶ್ವರ ಸೇರಿದಂತೆ ರಾಜ್ಯ, ದೇಶ, ವಿದೇಶಗಳ ಶಿವದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ನಡೆಯುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಸಲಾಗುತ್ತದೆ. ಇಡೀ ರಾತ್ರಿ ಶಿವದೇವಾಲಯಗಳಲ್ಲಿ ರುದ್ರಪಠಣದ ಜೊತೆ ಜಾಗರಣೆ ನಡೆಯುತ್ತದೆ. ಶಿವರಾತ್ರಿಯಂದು ಬೆಳಿಗ್ಗೆ ಬೇಗನೆ ಏಳುವ ಭಕ್ತರು, ಸ್ವಾನ ಮಾಡಿ, ಶುಚಿರ್ಭೂತರಾಗಿ ಶಿವದೇವಾಲಯಕ್ಕೆ ತೆರಳುತ್ತಾರೆ. ಕೆಲವರು ಕೈಲಾಸಯಂತ್ರ ರಚಿಸಿ, ಮನೆಯಲ್ಲಿಯೇ ಶಿವನಿಗೆ ವಿಶೇಷ ಪೂಜೆ ನಡೆಸುತ್ತಾರೆ. ಗಂಗಾ, ಬ್ರಹ್ಮಪುತ್ರ, ಕೃಷ್ಣ, ಕಾವೇರಿ, ತ್ರಿವೇಣಿ ಸಂಗಮ ಸೇರಿದಂತೆ ಪುಣ್ಯನದಿಗಳಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಕೆಲವರು ಹಾಲು, ಹಣ್ಣು ಸೇವಿಸಿ ಲಘು ಉಪಹಾರ ಸೇವಿಸಿದರೆ, ಕೆಲವು ಭಕ್ತರು ದಿನವಿಡಿ ಏನನ್ನೂ ತಿನ್ನದೆ, ನೀರನ್ನೂ ಕುಡಿಯದೆ ಉಪವಾಸ ಇರುತ್ತಾರೆ. ಭಸ್ಮ ಲೇಪಿಸಿಕೊಂಡು, ಬಿಲ್ವಾರ್ಚನೆ ಮೂಲಕ ರುದ್ರ ಪಠಣ ಹಬ್ಬದ ಆಚರಣೆಯ ವಿಶೇಷ. ಅಭಿಷೇಕಪ್ರಿಯ ಎಂದೇ ಖ್ಯಾತನಾದ ಶಿವನಿಗೆ ದಿನವಿಡಿ ಹಾಲು, ಜೇನುತುಪ್ಪ ಹಾಗೂ ನೀರಿನ ಅಭಿಷೇಕ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಬಿಲ್ವಪತ್ರೆ, ತುಳಸಿ, ಶ್ರೀ ಗಂಧ, ಹಾಲು, ಜೇನುತುಪ್ಪಗಳಿಂದ ಅಭಿಷೇಕ ನಡೆಯುತ್ತದೆ. ಶಿವ ಪಂಚಾಕ್ಷರಿ ಮಂತ್ರ "ಓಂ ನಮ: ಶಿವಾಯ", ಹರ ಹರ ಮಹಾದೇವ, ಶಂಭೋ ಶಂಕರ...ಶಿವದೇವಾಲಯಗಳಲ್ಲಿ ಮಾರ್ದನಿಸುತ್ತದೆ. ನಾಲ್ಕು ಆಯಾಮಗಳ ರುದ್ರಪಠಣ, ಶಿವರಾತ್ರಿ ಪೂಜೆಯ ವಿಶೇಷ. ಶಿವಪುರಾಣದ ಪ್ರಕಾರ ರುದ್ರ ಹಾಗೂ ಚಮೆಗಳ ಪಠಣ ಶಿವನಿಗೆ ಅಚ್ಚುಮೆಚ್ಚು. ದೇವಾಲಯಗಳಲ್ಲಿ ಸಂಜೆ 6 ಗಂಟೆಯಿಂದ ಮೊದಲ್ಗೊಂಡು ಮುಂಜಾನೆ 6 ಗಂಟೆಯವರೆಗೆ ರುದ್ರಪಠಣದ ಮೂಲಕ ಶಿವ ಸ್ತುತಿ, ಜಾಗರಣೆ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಮಂಗಳಾರತಿ ಮಾಡಲಾಗುತ್ತದೆ. ಬೆಳಗ್ಗೆ 6 ಗಂಟೆಗೆ ಮಹಾಮಂಗಳಾರತಿ ಆಚರಣೆ ಮೂಲಕ ಜಾಗರಣೆ ಮುಕ್ತಾಯಗೊಳ್ಳುತ್ತದೆ. ಮೊದಲನೆಯ ಆಯಾಮದಲ್ಲಿ ಹಾಲು, ಎರಡನೆಯ ಆಯಾಮದಲ್ಲಿ ಮೊಸರು, ಮೂರನೆಯ ಆಯಾಮದಲ್ಲಿ ತುಪ್ಪ ಹಾಗೂ ನಾಲ್ಕನೆಯ ಆಯಾಮದಲ್ಲಿ ಜೇನುತುಪ್ಪಗಳಿಂದ ಶಿವನಿಗೆ ಅಭಿಷೇಕ ಮಾಡುವ ಪದ್ಧತಿಯೂ ಕೆಲವೆಡೆ ಇದೆ. ಮತ್ತೊಮ್ಮೆ ಜ್ಞಾನದ ಸಂಕೇತವಾದ ಪರಶಿವನ ಪಾವನ ಮಹಾ ಶಿವರಾತ್ರಿಯ ಶುಭಾಶಯಗಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries