ಅಡೂರಿನಲ್ಲಿ ಸಹವಾಸ ಶಿಬಿರ ಸಮಾರೋಪ
0
ಮಾರ್ಚ್ 30, 2019
ಮುಳ್ಳೇರಿಯ : ಶಾಲೆಗಳಲ್ಲಿ ನಿರಂತರ ಚಟುವಟಿಕೆಗಳು ಅಗತ್ಯ. ಮಕ್ಕಳ ಮನಸ್ಸಿನ ಸುಪ್ತ ಪ್ರತಿಭೆಗಳು ಅರಳಿಸಬೇಕು. ಈ ನಿಟ್ಟಿನಲ್ಲಿ ಶಾಲೆಗಳು ಮಕ್ಕಳ ಪ್ರತಿಭೆಯನ್ನು ಬೆಳಕಿಗೆ ತಂದು ಪ್ರತಿಭಾನ್ವೇಷಣಾ ಕೇಂದ್ರಗಳಾಗಬೇಕು. ಹಸಿ ಮನಸಿನ ಮಕ್ಕಳಲ್ಲಿ ಸಂಸ್ಕಾರ ಬಿತ್ತಲು ಶಾಲೆಗಳು ಪ್ರೇರಕವಾಗಬೇಕು ಎಂದು ನಿಶಾ ಅಡೂರು ಹೇಳಿದರು.
ಅವರು ಅಡೂರಿನ ವಿದ್ಯಾಭಾರತೀ ವಿದ್ಯಾಲಯದಲ್ಲಿ ಗುರುವಾರ ಮುಕ್ತಾಯವಾದ ಸಹವಾಸ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಿದ್ಯಾಭಾರತಿ ವಿದ್ಯಾಲಯದ ಅಧ್ಯಕ್ಷೆ ಪ್ರೇಮಾ ಭಾರಿತ್ತಾಯ ವಹಿಸಿದ್ದರು. ಈ ಸಂದರ್ಭದಲ್ಲಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಲಕ್ಷ್ಮಣ ಪೊನಾರಂ(ಪುರಾಣ ಕಥೆ), ವಿರಾಜ್ ಅಡೂರು(ಚುಟುಕು ಹಾಗೂ ವ್ಯಂಗ್ಯಚಿತ್ರ), ರಘುನಾಥ ಮತ್ತು ಪ್ರತೀಕ್(ನೃತ್ಯ ಭಜನೆ), ಅನಿತಾ ಮುಳ್ಳೇರಿಯ(ಚಿತ್ರಕಲೆ ಮತ್ತು ಕರಕುಶಲ ವಸ್ತು ತಯಾರಿ) ಇವರನ್ನು ಅಭಿನಂದಿಸಲಾಯಿತು. ಶಿಬಿರದಲ್ಲಿ ನಡೆದ ವ್ಯಂಗ್ಯಚಿತ್ರ ರಚನಾ ಸ್ಪರ್ಧೆಯಲ್ಲಿ ಚಿಂತನ್ (ಪ್ರಥಮ), ಜ್ಞಾನೇಶ್, ಆದ್ಯಂತ್ ಅಡೂರು(ದ್ವಿತೀಯ), ಚುಟುಕು ಸ್ಪರ್ಧೆಯಲ್ಲಿ ಯಶ್ಮಿತಾ (ಪ್ರಥಮ) ಹಾಗೂ ಅನಘಾ(ದ್ವಿತೀಯ) ಬಹುಮಾನ ಪಡೆದರು. ಸಹವಾಸ ಶಿಬಿರದಲ್ಲಿ ಮಕ್ಕಳು ರಚಿಸಿದ ಚುಟುಕುಗಳ 'ಕಾವ್ಯ ಕನ್ನಡಿ' ಹಸ್ತಪ್ರತಿ ಸಂಕಲನವನ್ನು ಲಕ್ಷ್ಮಣ ಪೊನಾರಂ ಬಿಡುಗಡೆ ಮಾಡಿದರು. ಚೈತ್ರಾ ಹಾಗೂ ಚಿನ್ಮಯಿ ಶಿಬಿರದ ಬಗ್ಗೆ ಅನಿಸಿಕೆ ಹೇಳಿದರು. ವೇದಿಕೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ಬೈತನಡ್ಕ, ವೆಂಕಟ್ರಾಜ್, ಶಾರದಾ ಭಟ್ ಬೈತನಡ್ಕ, ಶಿಕ್ಷಕಿಯರಾದ ಭಾರತಿ, ಪ್ರೇಮಾವತಿ, ಸ್ವಾತಿ, ರಾಜಶ್ರೀ ಶಾಲಾ ಪಿಟಿಎ ಸದಸ್ಯರು ಭಾಗವಹಿಸಿದ್ದರು. ಸ್ಮಿತಾ ಮಾತೃಶ್ರೀ ಸ್ವಾಗತಿಸಿ, ಮಿನಿ ಮಾತೃಶ್ರೀ ವಂದಿಸಿದರು. ಚೈತ್ರಾ ಅಡೂರು ನಿರೂಪಿಸಿದರು. 3 ದಿನ ನಡೆದ ಸಹವಾಸ ಶಿಬಿರದಲ್ಲಿ ಸುಮಾರು 50ಕ್ಕೂ ಹೆಚ್ಚಿನ ಮಕ್ಕಳು ಭಾಗವಹಿಸಿದ್ದರು.