ಚುನಾವಣೆ: ಸಿಬ್ಬಂದಿಗೆ ಮೊದಲ ಹಂತದ ತರಬೇತಿ ಆರಂಭ
0
ಮಾರ್ಚ್ 27, 2019
ಕಾಸರಗೋಡು: ಲೋಕಸಭೆ ಚುನಾವಣೆಯ ಸಿದ್ಧತೆಗಳ ಅಂಗವಾಗಿ ನಡೆಸಲಾಗುವ ಮತಗಟ್ಟೆ ಕರ್ತವ್ಯ ಸಿಬ್ಬಂದಿಗೆ ಒದಗಿಸುವ ಮೊದಲ ಹಂತದ ತರಬೇತಿ ಪೆರಿಯ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಬುಧವಾರ ಆರಂಭಗೊಂಡಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತರಬೇತಿ ಉದ್ಘಾಟಿಸಿದರು. ಸಿಬ್ಬಂದಿಗೆ ತರಬೇತಿ ನೀಡುವ ಮೂಲಕ ತರಬೇತಿಗೆ ಅವರು ಚಾಲನೆ ನೀಡಿದರು. ಎಲ್ಲ ಸಿಬ್ಬಂದಿಯೊಂದಿಗೆ ನೇರ ಸಂವಾದ ನಡೆಸಿದ ಅವರು ಮಾಹಿತಿ ಮನವರಿಕೆಯಾಗಿರುವ ಬಗ್ಗೆ ಖಚಿತಪಡಿಸಿಕೊಂಡರು. ಎರಡನೇ ಹಂತದ ತರಬೇತಿಯಲ್ಲಿ ಹೆಚ್ಚುವರಿ ಮಾಹಿತಿ ನೀಡಲಾಗುವುದು ಎಂದು ಅವರು ನುಡಿದರು.
ಚುನಾವಣೆ ನಿರೀಕ್ಷಕರಾಗಿ ಜಿಲ್ಲೆಗೆ ಆಗಮಿಸಿರುವ ಪ್ರಮೋದ್ ಕುಮಾರ್ ಅವರೂ ತರಬೇತಿಯ ಅವಲೋಕನ ನಡೆಸಿ, ತೃಪ್ತಿ ವ್ಯಕ್ತಪಡಿಸಿದರು.
ತ್ರಿಕರಿಪುರ ಪಾಲಿಟೆಕ್ನಿಕ್ ನಲ್ಲಿ ನಡೆಯುತ್ತಿರುವ ತರಬೇತಿಯನ್ನು ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಉದ್ಘಟಿಸಿದರು. ಇಂದು (ಮಾ.28) ಕೂಡ ತರಬೇತಿ ಮುಂದುವರಿಯಲಿದೆ. ಅತಿ ತುರ್ತು ಔದ್ಯೋಗಿಕ ಕರ್ತವ್ಯಗಳಿರುವ ಸಿಬ್ಬಂದಿಗೆ ಈ ತರಬೇತಿಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದಲ್ಲಿ, ಕರ್ತವ್ಯ ಸಂಬಂಧ ದಾಖಲೆಗಳನ್ನು ಹಾಜರುಪಡಿಸಿದರೆ, ಮಾ.29ರಂದು ಬೆಳಗ್ಗೆ 9.30ಕ್ಕೆ ಪೆರಿಯ ನವೋದಯ ಪೋಲಿಟೆಕ್ನಿಕ್ ನಲ್ಲಿ ನಡೆಯುವ ಹೆಚ್ಚುವರಿ ಬ್ಯಾಚ್ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ.
ಗರಿಷ್ಠ 40 ಮಂದಿ ಬಾಗವಹಿಸುವ ಬ್ಯಾಚ್ ನಲ್ಲಿ ಎರಡು ದಿನಗಳ ತರಬೇತಿ ನಡೆಯುತ್ತಿದೆ. ಈ ವರ್ಷ ಎಲ್ಲ ಮತಗಟ್ಟೆಗಳಲ್ಲೂ ವಿವಿಪಾಟ್ ಸಹಿತ ಮತಯಂತ್ರಗಳು ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಪ್ರಾತ್ಯಕ್ಷಿಕೆ ಸಹಿತ ಮೂರೂವರೆ ತಾಸುಗಳ ಕಾಲ ತರಬೇತಿ ನಡೆಸಲಾಗುತ್ತಿದೆ. ಪ್ರಿಸೈಡಿಂಗ್ ಆಫೀಸರ್, ಫಸ್ಟ್ ಪೋಲಿಂಗ್ ಆಫೀಸರ್ ಆಗಿ ನೇಮಕಗೊಂಡಿರುವ 2618ಸಿಬ್ಬಂದಿಗೆ ಮೊದಲ ಹಂತದ ತರಬೇತಿ ಲಭಿಸುತ್ತಿದೆ.