ಉಗ್ರನೆಲೆಗಳಲ್ಲ, ಪ್ರಕೃತಿನಾಶವಾಗಿದೆ: ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಪಾಕ್ ನಿಂದ'ಇಕೋ ಟೆರರಿಸಂ' ದೂರು
0
ಮಾರ್ಚ್ 02, 2019
ಇಸ್ಲಾಮಾಬಾದ್: ಭಾರತೀಯ ವಾಯುಸೇನೆ ಕಳೆದ ಫೆಬ್ರವರಿ 26ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ್ದ ವಾಯುದಾಳಿಯಲ್ಲಿ ಉಗ್ರನೆಲೆಗಳು ನಾಶವಾಗಿಲ್ಲ, ಬದಲಿಹೆ ಪ್ರಕೃತಿನಾಶವಾಗಿದೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ತಾವು ಇಕೋ ಟೆರರಿಸಮ್ ದೂರು ದಾಖಲಿಸುವುದಾಗಿ ಪಾಕಿಸ್ತಾನ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಹವಾಮಾನ ಬದಲಾವಣೆ ಖಾತೆ ಸಚಿವ ಮಲಿಕ್ ಅಮೀನ್ ಅಸ್ಲಾಂ ಅವರು, ಭಾರತೀಯ ವಾಯುಸೇನೆಯ ವಾಯುದಾಳಿಯಲ್ಲಿ 300ಕ್ಕೂ ಅಧಿಕ ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಲಾಗುತ್ತಿದೆ. ಆದರೆ ವಾಸ್ತವ ಸಂಗತಿಯೇ ಬೇರೆ ಇದ್ದು, 300 ಉಗ್ರರಲ್ಲ, ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದೆ ಎಂದು ಹೇಳಿದ್ದಾರೆ.
'ಕಳೆದ ಫೆಬ್ರವರಿ 26ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿದ್ದ ಭಾರತೀಯ ವಾಯುಸೇನೆಯ ಜೆಟ್ ಯುದ್ಧ ವಿಮಾನಗಳು ಬಾಲಾಕೋಟ್ ಪಟ್ಟಣದ ಬೆಟ್ಟಗಳ ಮೇಲೆ ಬಾಂಬ್ ದಾಳಿ ನಡೆಸಿವೆ. ಈ ವೇಳೆ ಈ ಬೆಟ್ಟದಲ್ಲಿನ ದಟ್ಟಾರಣ್ಯದಲ್ಲಿದ್ದ ಅಪರೂಪದ ಗಿಡಮರಗಳು ನಾಶವಾಗಿವೆ. ದಾಳಿಯಲ್ಲಿ ಭಾರತ 300ಕ್ಕೂ ಅಧಿಕ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಳ್ಳುತ್ತಿದೆಯಾದರೂ, ವಾಸ್ತವವಾಗಿ ಇಲ್ಲಿ ಓರ್ವ ಹಿರಿಯ ವ್ಯಕ್ತಿಗೆ ಮಾತ್ರ ಗಾಯವಾಗಿದೆ. ಅದನ್ನು ಬಿಟ್ಟರೆ ಇಲ್ಲಿ ಯಾವುದೇ ಸಾವು-ನೋವುಗಳಾಗಿಲ್ಲ. ಆದರೆ ಇಲ್ಲಿನ ಅಪಾರ ಪ್ರಕೃತಿ ಸಂಪತ್ತಿಗೆ ಹಾನಿಯಾಗಿದೆ ಎಂದು ಹೇಳಿದ್ದಾರೆ.
ಭಾರತದ ಬಾಂಬ್ ಗಳಿಂದಾಗಿ ಇಲ್ಲಿನ ಅಪರೂಪದ ಪೈನ್ ಮರಗಳು ಧರೆಗುರುಳಿದ್ದು, ಇದಲ್ಲದೆ ಹತ್ತಾರು ಅಪರೂಪದ ಮರಗಳು ನಾಶವಾಗಿವೆ. ಅಲ್ಲದೆ ಇಲ್ಲಿನ ಪ್ರಾಣಿ ಮತ್ತು ಪಕ್ಷಿ ಸಂಕುಲಕ್ಕೆ ತೊಂದರೆಯಾಗಿದ್ದು, ಈ ಸಂಬಂದ ತಾವು ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಪರಿಸರ ಭಯೋತ್ಪಾದನೆ (ಇಕೋಟೆರರಿಸಂ) ದೂರು ದಾಖಲಿಸುತ್ತೇವೆ. ಭದ್ರತೆ ಹೆಸರಿನಲ್ಲಿ ಪ್ರಕೃತಿ ಮೇಲಿನ ದಾಳಿ ಸಹಿಸಲಸಾಧ್ಯ ಎಂದು ಮಲಿಕ್ ಅಮೀನ್ ಅಸ್ಲಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.