ಅಸ್ಸಾಂ ಒಪ್ಪಂದಕ್ಕೆ ಬದ್ಧ, ಎಲ್ಲಾ ಅಕ್ರಮ ವಲಸಿಗರೂ ರಾಜ್ಯದಿಂದ ಗಡಿಪಾರು: ಮೋದಿ
0
ಮಾರ್ಚ್ 30, 2019
ಮೊರಾನ್: ಅಸ್ಸಾಂ ಅಕಾರ್ಡ್ ಗೆ ಎನ್ ಡಿಎ ಬದ್ಧವಾಗಿದೆ, ಅಸ್ಸಾಂ ನ 6 ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಸ್ಥಾನ ಮಾನ ನೀಡುವುದಕ್ಕೆ ಗಂಭೀರವಾಗಿ ಚಿಂತನೆ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಸ್ಸಾಂ ನ ಮೊರಾನ್ ನಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂ ಒಪ್ಪಂದ ಒಮ್ಮೆ ಜಾರಿಯಾದರೆ ಎಲ್ಲಾ ಅಕ್ರಮ ವಲಸಿಗರನ್ನೂ ಅವರ ಧರ್ಮವನ್ನು ಲೆಕ್ಕಿಸದೇ ರಾಜ್ಯದಿಂದ ಗಡಿಪಾರು ಮಾಡಲಾಗುವುದು ಎಂದು ಮೋದಿ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಸ್ಥಗಿತಗೊಳಿಸಿದ್ದ ಅಸ್ಸಾಂ ಒಪ್ಪಂದವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಅಸ್ಸಾಂ ನ ಸಂಸ್ಕೃತಿ ಹಿತಾಸಕ್ತಿಗಳನ್ನು ಕಾಪಾಡಲು ನಾವು ಶ್ರಮಿಸುತ್ತಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ಸ್ವಾತಂತ್ರ್ಯ ಬಂದ ದಶಕಗಳ ನಂತರವೂ ಸಹ ಅಸ್ಸಾಂ ನ ಶೇ.40 ರಷ್ಟು ಮನೆಗಳಿಗೆ ವಿದ್ಯುತ್, ಅಡುಗೆ ಅನಿಲ ಸಂಪರ್ಕ ಇರಲಿಲ್ಲ. ಈಗ ಎಲ್ಲಾ ಮನೆಗಳಲ್ಲೂ ವಿದ್ಯುತ್, ಅಡುಗೆ ಅನಿಲ ಸಂಪರ್ಕ ಇದೆ. ನೀವು ನನಗೆ ನೀಡಿದ ಬೆಂಬಲ ಹಾಗೂ ಆಶೀರ್ವಾದದಿಂದ ದುರ್ಬಲರು, ಬಡವರು ಮತ್ತು ಬುಡಕಟ್ಟು ಜನರಿಗಾಗಿ ಮತ್ತಷ್ಟು ಹೆಚ್ಚು ಕೆಲಸ ಮಾಡುವ ಉತ್ಸಾಸ ಹೆಚ್ಚಾಗಿದೆ, ಬಿಜೆಪಿ ಸರ್ಕಾರದ ಬಗ್ಗೆ ಎಲ್ಲರೂ ಸಂತಸದಿಂದ ಇದ್ದಾರೆ ಎಂದು ಮೋದಿ ಹೇಳಿದ್ದಾರೆ.
ಎನ್ ಡಿಎ ಸರ್ಕಾರದ ಅವಧಿಯ ಸಾಧನೆಗಳನ್ನು ಹೇಳಿರುವ ಪ್ರಧಾನಿ ಮೋದಿ ನಮ್ಮ ಸರ್ಕಾರದ ಅವಧಿಯಲ್ಲಿ 27 ಲಕ್ಷ ಕುಟುಂಬಗಳು ತಲಾ 5 ಲಕ್ಷ ರೂಪಾಯಿ ಆರೋಗ್ಯ ವಿಮೆ ಪಡೆದಿವೆ. ರೈತರಿಗೆ ನೆರವು ನೀಡಲಾಗಿದೆ ಎಂದು ಹೇಳಿದ್ದಾರೆ.