ಪೆರಡಾಲ ಉದನೇಶ್ವರ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಸಂಪನ್ನ
0
ಮಾರ್ಚ್ 06, 2019
ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಬೆಳಿಗ್ಗೆ ಶ್ರೀದೇವರ ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಧ್ಯಾಹ್ನ ಶ್ರೀ ಪಿಲಿಚಾಮುಂಡಿ ದೈವದ ಕೋಲ, ಅರಸಿನ ಹುಡಿ ಪ್ರಸಾದದೊಂದಿಗೆ ವರ್ಷಾವಧಿ ಶಿವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ಸಂಪನ್ನವಾಯಿತು.
ಪ್ರಾಕ್ ಪದ್ದತಿ ಪ್ರಕಾರ ವರ್ಷಂಪ್ರತಿ ಆಚರಿಸಿಕೊಂಡು ಬರುವ ಮಹಾಶಿವರಾತ್ರಿ ಉತ್ಸವದ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು. ಸೋಮವಾರ ಬೆಳಿಗ್ಗೆ ಗಣಪತಿ ಹೋಮ, ಶತರುದ್ರಾಭಿಷೇಕ, ವಿವಿಧ ಭಜನಾ ಸಂಘಗಳಿಂದ ಭಜನೆ, ಸರಳಿ ಈಶ್ವರ ಪ್ರಕಾಶ ಬೆಂಗಳೂರು ಮತ್ತು ಬಳಗದವರಿಂದ ಸ್ವರಸಿಂಚನ ಸಂಗೀತ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ತುಲಾಭಾರ ಸೇವೆ, ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ರಾತ್ರಿ ನಾಟ್ಯನಿಲಯಂ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಮತ್ತು ಬಳಗದವರಿಂದ `ನೃತ್ಯ ಹೊಂಗಿರಣ' ಜನಮನಸೂರೆಗೊಂಡಿತು. ರಾತ್ರಿ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಪಾರಿಜಾತ ನರಕಾಸುರ ಮೈಂದದ್ವಿವಿದ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು. ಶ್ರೀ ದೇವರ ಬಲಿ ಉತ್ಸವ, ನವಕಾಭಿಷೇಕ, ವಸಂತಪೂಜೆ, ಶ್ರೀಭೂತಬಲಿ ನಡೆಯಿತು.