ದೊಂಪತ್ತಡ್ಕ ಕಗ್ಗಲು ಕೋರೆ: ಪರವಾನಿಗೆ ರದ್ದು ಗೊಳಿಸುವಂತೆ ಆಗ್ರಹಿಸಿ ಬೆಳ್ಳೂರು ಪಂಚಾಯಿತಿ ಪರಿಸರದಲ್ಲಿ ಸ್ಥಳೀಯರಿಂದ ಪ್ರತಿಭಟನೆ
0
ಮಾರ್ಚ್ 03, 2019
ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ.ದೊಂಪತ್ತಡ್ಕದಲ್ಲಿ ಕಳೆದ 30 ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿರುವ ಕಗ್ಗಲು ಖನನದಿಂದ ಕೋರೆ ಆಸುಪಾಸು ಪ್ರದೇಶಗಳಲ್ಲಿ ನೀರಿನ ಕ್ಷಾಮ, ಭೂ ಸವಕಳಿ ಮೊದಲಾಗಿ ಪ್ರಾಕೃತಿಕ ಹಾಗೂ ಆರೋಗ್ಯ ಸಮಸ್ಯೆಗಳು ತಲೆದೋರಿದೆ. ಕೋರೆಯಲ್ಲಿ ಬೃಹತ್ ಸ್ಪೋಟಕಗಳನ್ನು ಬಳಸುತ್ತಿದ್ದು ಶಬ್ದ ಮಾಲಿನ್ಯ, ಭೂ ಕಂಪನ, ಭೂ ಕುಸಿತ, ಸಮೀಪದ ಮನೆ ಗೋಡೆಗಳಲ್ಲಿ ಬಿರುಕು ಉಂಟಾಗಿದ್ದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿ ಹಾಗೂ ಪಂಚಾಯಿತಿ ಪರವಾನಿಗೆ ನವೀಕರಿಸದಂತೆ ಆಗ್ರಹಿಸಿ ಬೆಳ್ಳೂರು ದೊಂಪತ್ತಡ್ಕ ಏತಡ್ಕ ಪರಿಸರ ಸಂರಕ್ಷಣಾ ಸಮಿತಿ
ನೇತೃತ್ವದಲ್ಲಿ ಸ್ಥಳೀಯರು ಶುಕ್ರವಾರ ಪಂಚಾಯಿತಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಕಾಸರಗೋಡು ಸರಕಾರಿ ಕಾಲೇಜು ನಿವೃತ್ತ ಪ್ರಾಂಶುಪಾಲ, ಕೇರಳ ವಿಜ್ಞಾನ ಸಾಹಿತ್ಯ ಪರಿಷತ್ ಪರಿಸರ ಇಲಾಖೆ ಕಾಸರಗೋಡು ಜಿಲ್ಲಾ ಅಧ್ಯಕ್ಷ ಎಂ. ಗೋಪಾಲನ್ ಧರಣಿ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಧುರೀಣ, ಸ್ಥಳೀಯ ವೈದ್ಯರೂ ಆದ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ ಡಾ.ವೈ.ಎಸ್. ಮೋಹನ್ ಕುಮಾರ್ ಏತಡ್ಕ ಅಧ್ಯಕ್ಷತೆ ವಹಿಸಿದರು.
ದೊಂಪತ್ತಡ್ಕ ಕಗ್ಗಲ್ಲು ಕೋರೆ ಪರವಾನಿಗೆ ನವೀಕರಿಸದಂತೆ ಹಾಗೂ ರದ್ದುಗೊಳಿಸುವಂತೆ ಆಗ್ರಹಿಸಿ ಸ್ಥಳೀಯರ ಸಹಿಯೊಂದಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಸಮಿತಿ ಸಹ ಸಂಚಾಲಕ ಶಂಶುದ್ದೀನ್ ಕಿನ್ನಿಂಗಾರ್ ಸ್ವಾಗತಿಸಿ, ಕೆ. ಕೆ.ಅಬ್ದುಲ್ ಖಾದರ್ ವಂದಿಸಿದರು.
ಮುಖ್ಯಾಂಶ:
ಕಳೆದ ಅಕ್ಟೋಬರ್ 10ರಂದು ಬೆಳ್ಳೂರು ಪಂಚಾಯಿತಿ ಕೋರೆಯ ಪರವಾನಿಗೆ ನವೀಕರಿಸದಿರಲು ಹಾಗೂ ರದ್ದುಗೊಳಿಸಲು ತೀರ್ಮಾನಿಸಿದ್ದರೂ ಕಾನೂನು ಅಡಚಣೆಗಳಿಂದ ಅದನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ
....................................................................................................................................
ಕೆಲವು ದಿನಗಳ ಹಿಂದೆ ಕೋರೆಯಲ್ಲಿ ಕಗ್ಗಲ್ಲು ಸ್ಪೋಟಿಸುವ ಸಂದರ್ಭದಲ್ಲಿ ಭಾರೀ ಗಾತ್ರದ ಕಲ್ಲುಗಳು ಎಸೆಯಲ್ಪಟ್ಟಿದ್ದು ಸಮೀಪದ ಮನೆಗಳಿಗೆ ಹಾನಿ ಉಂಟಾಗಿರುವುದಾಗಿ ಹೇಳಲಾಗುತ್ತಿದ್ದು ವ್ಯಕ್ತಿಯೋರ್ವರು ಕೂದಲೆಳೆ ಅಂತರದಿಂದ ಪಾರಾಗಿದ್ದು, ಈ ಬಗ್ಗೆ ಕೋರೆ ಮಾಲಿಕರಲ್ಲಿ ವಿಚಾರಿಸಿದಾಗ ಸಾವು ಬರುವುದಿದ್ದರೆ ಅಪಘಾತ ಅಥವಾ ಇನ್ಯಾವುದೋ ರೀತಿಯಲ್ಲೂ ಬರುವುದು.ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಹಿಯಾಳಿಸಿರುವುದಾಗಿ ಹೇಳಲಾಗಿದೆ.
......................................................................................................................................
ರಾತ್ರಿ ಹಗಲೆನ್ನದೆ ಕೋರೆಯಿಂದ ಕಲ್ಲು ಸಾಗಿಸುವ ಬೃಹತ್ ಟಿಪ್ಪರ್ ಲಾರಿಗಳು ಬದಿಯಡ್ಕ ಏತಡ್ಕ ಕಿನ್ನಿಂಗಾರು ರಸ್ತೆಯಲ್ಲಿ ಅಮಿತ ಭಾರ ಹೇರಿ ಸಂಚರಿಸುವ ಕಾರಣ ರಸ್ತೆ ಸಂಪೂರ್ಣ ಜರ್ಜರಿತವಾಗಿದೆ.
.......................................................................................................................................
ಏನಂತಾರೆ?:
ಕೆಲವೊಂದು ಸತ್ಯ ಸಂಗತಿಗಳನ್ನು ಮುಚ್ಚಿಟ್ಟು, ರಾಜಕೀಯ ಪ್ರಭಾವ ಇನ್ನಿತರ ಒತ್ತಡಗಳ ಮೂಲಕ ಅಧಿಕಾರಿಗಳ ಬಾಯಿ ಮುಚ್ಚಿಸಿ ಕಳೆದ ಮೂವತ್ತು ವರ್ಷಗಳಿಂದ ದೊಂಪತಡ್ಕದಲ್ಲಿ ಕಾರ್ಯಾಚರಿಸುತ್ತಿರುವ ಕಗ್ಗಲ್ಲಿನ ಕೋರೆಗೆ ಪರವಾನಿಗೆ ಪಡೆಯಲಾಗಿದೆ.ನಿಬಂಧನೆಗಳನ್ನೂ ಮೀರಿ ಕಿತ್ತಳೆ ಆಕಾರದ ಗುಡ್ಡೆಯ ಅರ್ಧದಷ್ಟು ಭಾಗ ಭೂಗರ್ಭವನ್ನು ಬಗೆದು ನಾಶಗೊಳಿಸಲಾಗಿದೆ.ಇನ್ನುಳಿದ ಭೂಭಾಗದ ಗ್ರಾಮ ಕುಸಿದು ನಾಪತ್ತೆಯಾಗುವ ಭಯ ಕಾಡಿದೆ.ಮಂತ್ರಿಗಳು, ಇಲಾಖೆ ಅಧಿಕಾರಿಗಳು, ಗುಮಾಸ್ತ, ಪೇದೆಗಳು ಕೋರೆ ಮಾಲಿಕರ ಕೈಗೊಂಬೆಗಳಾಗಿ ಬದಲಾಗಿದ್ದಾರೆ.ಹಳ್ಳಿಯ ಬಡ ಜನತೆ, ಅನಕ್ಷರರಾಗಿದ್ದು ಕೋರೆ ಲಾಬಿಯ ವಿರುದ್ಧ ಹೋರಾಟ ನಡೆಸುವ ಪಕ್ವತೆ ಹೊಂದಿಲ್ಲ. ಹೋರಾಟದ ಮುಂಚೂಣಿ ವಹಿಸಿದ ಹಲವರಿಗೆ ಬೆದರಿಕೆ, ಹುಸಿ ಆಪಾದನೆ, ದೂರು ನೀಡುವ ಮೂಲಕ ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ. ಪ್ರಜ್ಞಾವಂತ ನಾಗರಿಕರು, ಪರಿಸರ ಪ್ರೇಮಿಗಳು, ಮಾಧ್ಯಮಗಳು ಸುಂದರ ನಾಡಿನ ಉಳಿವಿಗಾಗಿ ಕೈ ಜೋಡಿಸ ಬೇಕಾಗಿದೆ.
ಡಾ.ಮೋಹನ್ ಕುಮಾರ್ ವೈ.ಯಸ್. ಸ್ಥಳೀಯ ವೈದ್ಯರು, ಸಾಮಾಜಿಕ ಹೋರಾಟಗಾರರು ಏತಡ್ಕ