ಪಾತೂರು ಶಾಲಾ ಕಲಿಕೋತ್ಸವ
0
ಮಾರ್ಚ್ 02, 2019
ಮಂಜೇಶ್ವರ: ಪಾತೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ಸಮಾರಂಭವು ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾ.ಪಂ. ಸದಸ್ಯೆ ಗೀತಾ ವಿ. ಸಾಮಾನಿಯವರು ಮಕ್ಕಳ ಕಲಿಕಾ ಸಾಧನೆಗಳ ಪ್ರದರ್ಶನ ವೇದಿಕೆಯಾಗಿ ಕಾರ್ಯಕ್ರಮವು ಹೊರ ಹೊಮ್ಮಲಿ ಎಂದು ನುಡಿದರು. ಸಭೆಯ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾಯಿನಿಕೇತನ ಟ್ರಸ್ಟ್ ದೈಗೋಳಿ ಇದರ ಕಾರ್ಯದರ್ಶಿ ಗೋವಿಂದರಾಮ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಬು ಗಟ್ಟಿ, ಸಿ.ಆರ್.ಸಿ ಸಂಯೋಜಕಿ ಚಂದ್ರಿಕಾ ಟೀಚರ್, ಮಾತೃ ಸಂಘದ ಅಧ್ಯಕ್ಷೆ ರೇವತಿ ಮೊದಲಾದವರು ಶುಭಹಾರೈಸಿದರು.
ಈ ಸಂದರ್ಭದಲ್ಲಿ ವರ್ಕಾಡಿ ಗ್ರಾಮ ಪಂಚಾಯತಿ ಆಯುಷ್ ಕ್ಲಬ್ಬಿನ ಉದ್ಘಾಟನೆಯನ್ನು ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ. ಶಿಮ್ನಾ ಅವರು ಔಷಧಿ ಗಿಡವನ್ನು ಗ್ರಾ.ಪಂ. ಸದಸ್ಯೆಗೆ ವಿತರಿಸುವ ಮೂಲಕ ನಡೆಸಿಕೊಟ್ಟರು. ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ ಸುರೇಶ ಬಂಗೇರ ಸ್ವಾಗತಿಸಿ, ಅಧ್ಯಾಪಕ ಉಸ್ಮಾನ್ ವಂದಿಸಿದರು. ಅಧ್ಯಾಪಕ ಅಬ್ದುಲ್ ಮಜೀದ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಫಾತಿಮತ್ ಝೌರ, ಝೀನಾಮೋಳ್ ಸಹಕರಿಸಿದರು. ಬಳಿಕ ಮಕ್ಕಳ ಕಲಿಕಾ ಸಾಧನೆಗಳ ಪ್ರದರ್ಶನ ನಡೆಯಿತು.