ಪೊಳಲಿ ಬ್ರಹ್ಮಕಲಶೋತ್ಸವ-ಮಂಜೇಶ್ವರ ತಾಲೂಕು ಸಮಿತಿ ಸಭೆ
0
ಮಾರ್ಚ್ 02, 2019
ಮಂಜೇಶ್ವರ: ನಿಸ್ವಾರ್ಥವಾದ ಭಗವಂತನ ಸೇವೆಯ ಫಲ ಜೀವಿತಾವಧಿಯಲ್ಲಿ ಪ್ರಾಪ್ತಿಯಾಗುತ್ತದೆ. ಬ್ರಹ್ಮಕಲಶದಂತಹ ಪುಣ್ಯ ಕಾರ್ಯದಲ್ಲಿ ಕಾರ್ಯ ನಿರ್ವಹಿಸುವುದು ಮಾನವನ ಜೀವಿತಾವಧಿಯಲ್ಲಿ ಲಭ್ಯವಾಗುವ ಪುಣ್ಯಗಳಲ್ಲಿ ಒಂದು. ಪೊಳಲಿ ರಾಜರಾಜೇಶ್ವರೀ ಮಾತೆಯ ಪುನರ್ ಪ್ರತಿಪ್ಠಾ ಬ್ರಹ್ಮಕಲಶದಲ್ಲಿ ಭಾಗಿಯಾಗುವುದು ತುಳುನಾಡಿನ ನಾಗರೀಕರ ಪುಣ್ಯದ ಭಾಗ ಎಂದು ಪೊಳಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ನುಡಿದರು.
ಅವರು ಶುಕ್ರವಾರ ಸಂಜೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆದ ಪೊಳಲಿ ಶ್ರೀ ರಾಜ ರಾಜೇಶ್ವರೀ ದೇವಸ್ಥಾನದ ಪುನರ್ ಪ್ರತಿಪ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮಂಜೇಶ್ವರ ತಾಲೂಕು ಸಮಿತಿ ರೂಪೀಕರಣದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆಯ ಮಧ್ಯೆಯು ಹಿಂದೂ ಧಾರ್ಮಿಕತೆ ಇಂದು ಜೀವಂತವಾಗಿರುವುದು ಹಿಂದುಗಳ ಪಾರಂಪರಿಕ ಧಾರ್ಮಿಕ ಆಚರಣೆಗಳಿಂದ. ನಾಸ್ತಿಕವಾದಿಗಳು ಕೇರಳದಲ್ಲಿ ದೇವರಿಗೆ ಅಪಚಾರವೆಸಗುತ್ತಿರುವುದು ಖೇದಕರವಾಗಿದೆ. ಆದರೆ ತುಳುನಾಡಿನ ಮಣ್ಣಿನಲ್ಲಿ ನಾಸ್ತಿಕರಿಗೆ ಸ್ಥಾನವಿಲ್ಲವೆಂದು ಅವರು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಪ್ರಸಾದ್ ಅತ್ತಾವರ ಮಾತನಾಡಿ, ಪೊಳಲಿ ರಾಜ ರಾಜೇಶ್ವರಿ ತಾಯಿಯು ಲಕ್ಷಾಂತರ ಭಕ್ತರ ತಾಯಿಯಾಗಿದ್ದಾಳೆ. ತಾಯಿಯ ಕ್ಷೇತ್ರದ ಬ್ರಹ್ಮಕಲಶದಲ್ಲಿ ಭಾಗವಹಿಸಿ ಅನುಗ್ರಹ ಪಡೆಯುವುದು ನಮ್ಮೆಲ್ಲರ ಪುಣ್ಯದ ಫಲವಾಗಿದೆ. ಪ್ರತಿಯೊಂದು ಮನೆಯಿಂದ ಅಕ್ಕಿ ಹಾಗೂ ತೆಂಗಿನಕಾಯಿಯನ್ನು ತಮ್ಮ ಹೊರೆಕಾಣಿಕೆಯಾಗಿ ನೀಡಿದರೆ ಬ್ರಹ್ಮಕಲಶೋತ್ಸವದ ಅನ್ನ ಸಂತರ್ಪಣೆ ಪೂರಕವಾಗಲಿದೆ ಹಾಗೂ ತಾಯಿಯ ಅನುಗ್ರಹ ಲಭಿಸಲಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಪದ್ಮನಾಭ ಕಡಪ್ಪರ ವಹಿಸಿದರು. ಈ ವೇಳೆ ಬ್ರಹ್ಮಕಲಶೋತ್ಸವದ ಉಳ್ಳಾಲ ಹೊರೆಕಾಣಿಕೆ ಸಮಿತಿಯ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಸದಸ್ಯ ಚಂದ್ರಹಾಸ ಅಡ್ಯಂತಾಯ, ಬ್ರಹ್ಮಕಲಶೋತ್ಸವದ ಸಂಚಾಲಕ ಸುರೇಂದ್ರ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಧಾರ್ಮಿಕ ಮುಂದಾಳುಗಳಾದ ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು, ಗೋಪಾಲ ಶೆಟ್ಟಿ ಅರಿಬೈಲು ಮೊದಲಾದವರು ಉಪಸ್ಥಿತರಿದ್ದು, ಮಾತನಾಡಿ ಪೊಳಲಿ ಶ್ರೀ ರಾಜ ರಾಜೇಶ್ವರೀ ತಾಯಿಯ ಬ್ರಹ್ಮಕಲಶೋತ್ಸವಕ್ಕೆ ಸಹಕರಿಸಲು ಕರೆ ನೀಡಿದರು ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಸಾಂಪ್ರಾದಾಯಿಕವಾಗಿ ಬಿಡುಗಡೆಗೊಳಿಸಿ, ಮಂಜೇಶ್ವರ ತಾಲುಕಿನಾದ್ಯಂತ ಭಕ್ತರ ಮನೆಗೆ ತಲುಪಿಸಲು ಚಾಲನೆ ನೀಡಿದರು. ಈ ವೇಳೆ ಪೊಳಲಿ ಶ್ರೀ ರಾಜ ರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಮಂಜೇಶ್ವರ ತಾಲೂಕು ಸಮಿತಿಯನ್ನು ರೂಪೀಕರಿಸಲಾಯಿತು.
ಗೌರವಾಧ್ಯಕ್ಷರಾಗಿ ಧಾರ್ಮಿಕ ಮುಂದಾಳುಗಳಾದ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಗೋಪಾಲ ಶೆಟ್ಟಿ ಅರಿಬೈಲು, ದಿನಕರ್ ಬಿ.ಎಮ್., ಅಧ್ಯಕ್ಷರಾಗಿ ಪಧ್ಮನಾಭ ಕಡಪ್ಪರ, ಪ್ರಧಾನ ಕಾರ್ಯದರ್ಶಿಯಾಗಿ ಆದರ್ಶ್ ಬಿ.ಎಮ್., ಪ್ರಧಾನ ಸಂಚಾಲಕರಾಗಿ ಯಾದವ ಬಡಾಜೆ, ರತನ್ ಕುಮಾರ್ ಹೊಸಂಗಡಿ, ಚಂದ್ರಹಾಸ ಪೆಲಪ್ಪಾಡಿ, ಬಾಬು ಮಾಸ್ತರ್, ದೇವರಾಜ್ ಎಮ್.ಎಸ್., ಉಪಾಧ್ಯಕ್ಷರಾಗಿ ನ್ಯಾಯವಾದಿ. ನವೀನ್ ರಾಜ್ ಕೆ.ಜೆ, ಭರತ್ ಕನಿಲ, ಉದಯ ಪಾವಳ, ಕಾರ್ಯದರ್ಶಿಗಳಾಗಿ ಎಸ್.ಎನ್ ಕಡಂಬಾರ್, ಯು.ಜಿ. ರೈ, ಚಂದ್ರಹಾಸ ಬಿ.ಎಮ್, ಶಿವಪ್ರಸಾದ್ ಪೆಲಪ್ಪಾಡಿ, ಸುರೇಶ್ ಗಾಣಿಂಜಾಲ್, ಸುದೀನ್ ಕುಮಾರ್, ಮಹೇಂದ್ರ ಕಡಂಬಾರ್, ಪ್ರಮೋದ್ ಕನಿಲ, ಸಹ ಸಂಚಾಲಕರಾಗಿ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೊಡಿ, ಸದಾಶಿವ ವರ್ಕಾಡಿ, ವಿಕ್ರಮದತ್ತ ಪೈ ವರ್ಕಾಡಿ, ಕೃಷ್ಣಪ್ಪ ಪೂಜಾರಿ ಬಡಾಜೆ, ಜಯರಾಮ ಶೆಟ್ಟಿ ಕಡಂಬಾರ್, ರವಿ ಮುಡಿಮಾರ್, ವರುಣ್ ಹೆಗ್ಡೆ, ಸಂತೋಷ್ ಪೆಲಪ್ಪಾಡಿ, ಪಂಚಾಯತಿ ಸಂಚಾಲಕರಾಗಿ ಲೋಹಿತ್ ಉಪ್ಪಳ (ಮಂಗಲ್ಪಾಡಿ), ಧನ್‍ಷ್ ಬಾಯಾರ್ (ಪೈವಳಿಕೆ), ಸುಧಾಕರ ಕಾಮತ್ (ಕುಂಬಳೆ), ಜನಾರ್ಧನ ಆಚಾರ್ಯ ಮಜಿಬೈಲು (ಮೀಂಜ), ಆನಂದ ತಚ್ಚಿರೆ (ವರ್ಕಾಡಿ) ತುಳಸಿದಾಸ್ ಮಂಜೇಶ್ವರ (ಮಂಜೇಶ್ವರ) ಮೊದಲಾದವರನ್ನು ಆರಿಸಲಾಯಿತು.
ಪೊಳಲಿ ಬ್ರಹ್ಮಕಲಶೋತ್ಸವವು ಮಾ. 4ರಿಂದ ಮೊದಲ್ಗೊಂಡು 13ರ ವರೆಗೆ ನಡೆಯಲಿದ್ದು ಕಾರ್ಯಕ್ರಮದಂಗವಾಗಿ ಮಂಜೇಶ್ವರ ತಾಲೂಕು ಸಮಿತಿ ವತಿಯಿಂದ ಮಾ. 8ರಂದು ಶುಕ್ರವಾರ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಿಂದ ಬೆಳಿಗ್ಗೆ 10.ಕ್ಕೆ ಹಸಿರುವಾಣಿ ಹೊರೆಕಾಣಿಕೆ ಹೊರಡಲಿದೆ. ಭಕ್ತಾಧಿಗಳು ಹಸಿರುವಾಣಿ ವಸ್ತುಗಳನ್ನು ಮಾ.7 ರ ಮೊದಲು ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರಕ್ಕೆ ತಲುಪಿಸಿ, ಸರ್ಮಪಿಸಬಹುದಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಮ್. ಸ್ವಾಗತಿಸಿ, ದಿನಕರ್ ಬಿ.ಎಮ್. ವಂದಿಸಿದರು.