ಇಸ್ಲಾಮಿಕ್ ರಾಷ್ಟ್ರಗಳ ಎದುರೆ ಭಯೋತ್ಪಾದನೆ ವಿರುದ್ಧ ಗುಡುಗಿದ ಸುಷ್ಮಾ ಸ್ವರಾಜ್!
0
ಮಾರ್ಚ್ 02, 2019
ಅಬುದಾಬಿ: ಭಯೋತ್ಪಾದನೆಯಿಂದ ವಿಶ್ವದಲ್ಲೇ ಹಿಂಸಾಚಾರ ಹೆಚ್ಚಾಗಿದೆ. ಇಂತಹ ಭಯೋತ್ಪಾದನೆ ವಿರುದ್ಧ ಜಗತ್ತಿನ ದೇಶಗಳೆಲ್ಲಾ ಒಟ್ಟಾಗಿ ಹೋರಾಡಬೇಕಿದೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) ಸಮಾವೇಶದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಒಐಸಿ ಸಮಾವೇಶಕ್ಕೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗೌರವ ಅತಿಥಿಯಾಗಿ ಭಾಗವಹಿಸಿದ್ದು ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಸ್ಲಾಂ ಧರ್ಮದಲ್ಲಿ ಶಾಂತಿಯನ್ನು ಹೇಳಿಕೊಡಲಾಗುತ್ತದೆ. ಆದರೆ ಕೆಲ ದೇಶಗಳು ಭಯೋತ್ಪಾದನೆಗೆ ಆಶ್ರಯ ನೀಡುತ್ತಿದೆ. ಭಯೋತ್ಪಾದನೆಗೆ ಹಣ ನೀಡುವ, ಆಶ್ರಯ ನೀಡುವ ದೇಶಗಳ ಬಣ್ಣ ಬಯಲು ಮಾಡಬೇಕಿದೆ ಎಂದರು.
ಭಾರತ ವಿವಿಧತೆಗಳಿಂದ ಕೂಡಿರುವ ರಾಷ್ಟ್ರವಾಗಿದೆ. ಭಾರತದಲ್ಲಿ ಎಲ್ಲಾ ಧರ್ಮ ಎಲ್ಲಾ ಸಂಸ್ಕೃತಿಯನ್ನು ಗೌರವಿಸಲಾಗುತ್ತದೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರು ಜಗತ್ತಿಗೆ ಶಾಂತಿ ಪಾಠವನ್ನು ಬೋದಿಸಿದರು. ಗಲ್ಫ್ ರಾಷ್ಟ್ರಗಳ ಜೊತೆಗೆ ನಮ್ಮ ಬಾಂಧವ್ಯ ಚೆನ್ನಾಗಿದೆ ಎಂದರು.
ಭಯೋತ್ಪಾದನೆಯ ವಿರುದ್ಧ ನಾವು ಸಮರ ಸಾರಿದ್ದು ಯಾವುದೇ ಧರ್ಮ ಅಥವಾ ದೇಶ ವಿರುದ್ಧವಲ್ಲ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ದೇಶದಲ್ಲಿ ನಾವು ಕಾರ್ಯಾಚರಣೆ ನಡೆಸಿದ್ದೇವೆ ಎಂದು ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ಸುಷ್ಮಾ ಸ್ವರಾಜ್ ವಾಗ್ದಾಳಿ ನಡೆಸಿದ್ದಾರೆ.