ವಿಜ್ಞಾನಿಗಳ ಸಾಧನೆ ಕುರಿತ ಮೋದಿ ಭಾಷಣ: ನೀತಿ ಸಂಹಿತೆ ಉಲ್ಲಂಘನೆ ತನಿಖೆಗೆ ಮುಂದಾದ ಆಯೋಗ
0
ಮಾರ್ಚ್ 28, 2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತದ ಬಾಹ್ಯಾಕಾಶ ವಿಜ್ಞಾನಿಗಳ ಸಾಧನೆ ಕುರಿತಂತೆ ಬುಧವಾರ ಬೆಳಿಗ್ಗೆ ಮಾಡಿದ್ದ ಭಾಷಣ ಪ್ರಸಕ್ತ ಜಾರಿಯಲ್ಲಿರಿವ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆಯೆ? ಇದನ್ನು ತೀರ್ಮಾನಿಸಲು ಚುನಾವಣಾ ಆಯೋಗದ ನೇತೃತ್ವದಲ್ಲಿ ಉಪಸಮಿತಿಯೊಂದು ರಚನೆಯಾಗಿದೆ.
ಮಾದರಿ ನೀತಿ ಸಂಹಿತೆಯಡಿಯಲ್ಲಿ ತಕ್ಷಣ ವಿಷಯವನ್ನು ಪರಿಶೀಲಿಸಬೇಕೆಂದು ಆಯೋಗವು ಸಮಿತಿಯ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಈ ಮಧ್ಯೆ ಸಹ ರಾಷ್ಟ್ರೀಯ ಭದ್ರತೆ, ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ವಿಚಾರಗಳು ಮಾದರಿ ನೀತಿ ಸಂಹಿತೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಕೆಲ ನುರಿತ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಮಾರ್ಚ್ 10ರಂದು ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾದಂದಿನಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಏಪ್ರಿಲ್ 11ರಿಂದ ಏಳು ಹಂತಗಳಲ್ಲಿ ಭಾರತದ ಸಂಸತ್ತಿಗೆ ಚುನಾವಣೆ ನಡೆಯಲಿದ್ದು ಮೇ 23ಕ್ಕೆ ಫಲಿತಾಂಶ ಘೋಷಣೆಯಾಗಲಿದೆ.
ಸರ್ಕಾರದ ಮಹತ್ವದ ಸಾಧನೆ ಯನ್ನು ಉಲ್ಲೇಖಿಸಿದ ಕಾರಣ ಪ್ರಧಾನಮಂತ್ರಿಯ ಭಾಷಣ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ವಿಪಕ್ಷಗಳು ಆರೋಪಿಸಿದೆ. ಅಲ್ಲದೆ ಭಾಷಣದಲ್ಲಿನ ವಿಚಾರವು ರಾಷ್ಟ್ರೀಯ ಭದ್ರತೆಗೆ ನೇರವಾಗಿ ಸಂಬಂಧಿಸಿಲ್ಲ ಎಂದೂ ಅವು ವಾದಿಸಿದೆ.
ಸಮಿತಿಗೆ ವರದಿ ನೀಡಲು ಅಂತಿಮ ಗಡುವನ್ನೇನೂ ನೀಡಿಲ್ಲವಾಗಿಯೂ ಅತಿ ಶೀಘ್ರವಾಗಿ ತನಿಖೆ ಪೂರ್ಣಗೊಳ್ಳಬೇಕು ಎಂದು ಮೂಲಗಳು ತಿಳಿಸಿದೆ.
ನಿನ್ನೆ ಬೆಳಿಗ್ಗೆ ಭದ್ರತಾ ಸಲಹೆಗಾರರ ಕ್ಯಾಬಿನಟ್ ಸಭೆ ಬಳಿಕ ಪ್ರಧಾನಮಂತ್ರಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದರು. 'ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ 300 ಕಿ.ಮೀ ದೂರ (ಎಲ್‍ಇಓ) (ಲೋ ಅರ್ಥ್ ಆರ್ಬಿಟ್)ದಲ್ಲಿರುವ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸಿದ್ದಾರೆ. ಕೇವಲ 3 ನಿಮಿಷಗಳಲ್ಲಿ ಯಶಸ್ವಿಯಾಗಿ ಈ ಕಾರ್ಯಾಚರಣೆಯನ್ನು ವಿಜ್ಞಾನಿಗಳು ಯಶಸ್ವಿಗೊಳಿಸಿದ್ದಾರೆ. ಮಿಷನ್ ಶಕ್ತಿ ಎಂಬ ಅತ್ಯಂತ ಕಠಿಣ ಕಾರ್ಯಾಚರಣೆ ಇದಾಗಿತ್ತು. ಅತ್ಯಂತ ಹೆಚ್ಚು ವೆಚ್ಚ ಬಯಸುವ ಈ ಕಾರ್ಯಾಚರಣೆಯನ್ನು ಅತಿ ಕಡಿಮೆ ವೆಚ್ದದಲ್ಲಿ ನಮ್ಮ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ'. ಎಂದು ಅವರು ಹೇಳೀದ್ದರು.