ಅಧ್ಯಾಪನ ವೃತ್ತಿ ಶ್ರೇಷ್ಠ : ಕೈಲಾಸಮೂರ್ತಿ ಪೆರಡಾಲ : ಶ್ರೀಕೃಷ್ಣ ಭಟ್ ಬೀಳ್ಕೊಡುಗೆ ಸಮಾರಂಭ
0
ಮಾರ್ಚ್ 30, 2019
ಬದಿಯಡ್ಕ: ಅಧ್ಯಾಪನ ವೃತ್ತಿ ಶ್ರೇಷ್ಠವಾದುದಾಗಿದ್ದು ಸಾವಿರಾರು ಮಕ್ಕಳ ಬಾಳು ಬೆಳಗಿಸುವ ಪವಿತ್ರ ಕಾರ್ಯ. ವೃತ್ತಿಯಿಂದ ನಿವೃತ್ತಿಯು ಉತ್ತಮ ಪ್ರವೃತ್ತಿ ಬೆಳೆಯಲು ಕಾರಣವಾಗಲಿ ಎಂದು ಕುಂಬಳೆ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ ಹೇಳಿದರು.
ಪೆರಡಾಲ ಸರಕಾರಿ ಪ್ರೌಢಶಾಲೆಯಲ್ಲಿ ಸುದೀರ್ಘಕಾಲ ಶಿಕ್ಷಕರಾಗಿ ಸೇವೆಸಲ್ಲಿಸಿ ನಿವೃತ್ತರಾಗುತ್ತಿರುವ ಶ್ರೀಕೃಷ್ಣ ಭಟ್ ಚಾಲಿತ್ತಡ್ಕ ಅವರಿಗೆ ಶುಕ್ರವಾರ ಏರ್ಪಡಿಸಲಾಗಿದ್ದ ಸಮ್ಮಾನ ಹಾಗೂ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ಬದಲಾದ ಕಾಲಘಟ್ಟದಲ್ಲಿ ನಿರಂತರ ಜ್ಞಾನ ಪಿಪಾಸುಗಳಾಗಬೇಕಾದ ಅಗತ್ಯತೆಯನ್ನುಅವರು ವಿವರಿಸಿದರು. ಶ್ರೀಕೃಷ್ಣ ಭಟ್ ಅವರ ಸರಳ ನಡೆನುಡಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಬಡುವನ್ ಕುಂಞÂ ಅಧ್ಯಕ್ಷತೆವಹಿಸಿ ಮಾತನಾಡಿ ಅಧ್ಯಾಪಕರು ಸಮಾಜಕ್ಕೆ ದಾರಿತೋರುವ ದೀಪವೆಂದು ಅಭಿಪ್ರಾಯಪಟ್ಟರು. ಉಪಾಧ್ಯಕ್ಷ ರಾಮ ಮಾತನಾಡಿ ಜೀವನದುದ್ದಕ್ಕೂ ಅಧ್ಯಾಪಕರಿಗೆ ಗೌರವ ಸಲ್ಲುತ್ತದೆ ಎಂದರು. ರಕ್ಷಕ ಶಿಕ್ಷಕ ಸಮಿತಿಯ ಅಬ್ಬಾಸ್, ಸಮಿತಿಯ ಬಡುವನ್ ಕುಂಞÂ ಶುಭಾಶಂಶನೆಗೈದರು.
ಶ್ರೀಕೃಷ್ಣ ಭಟ್ ಅವರಿಗೆ ಚಿನ್ನದುಂಗುರ ತೊಡಿಸಿ, ಶಾಲು ಹೊದೆಸಿ, ಸ್ಮರಣಿಕೆ ಸಮ್ಮಾನ ಪತ್ರ, ಹಣ್ಣುಹಂಪಲು ಅರ್ಪಿಸಿ ಗೌರವಿಸಲಾಯಿತು. ಶಿಕ್ಷಕಿ ದಿವ್ಯಗಂಗಾ ಪಿ. ಸಮ್ಮಾನ ಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ಶ್ರೀಕೃಷ್ಣ ಭಟ್ ಅವರು ಶಾಲೆಗೆ ಕೊಡುಗೆಯಾಗಿ ನೀಡಿದ ಪೀಠೋಪಕರಣಗಳನ್ನು ಮುಖ್ಯೋಪಾಧ್ಯಾಯ ರಾಜಗೋಪಾಲ ಅವರಿಗೆ ಹಸ್ತಾಂತರಿಸಿದರು. ಈ ವರ್ಷ ನಿವೃತ್ತರಾಗುವ ಕುಂಬಳೆ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ ಅವರನ್ನು ಶಾಲು ಹೊದೆಸಿ ಸ್ಮರಣಿಕೆಯಿತ್ತು ಗೌರವಿಸಲಾಯಿತು. ಶಿಕ್ಷಕರಾದ ಶ್ರೀಧರನ್, ಗೋಪಾಲಕೃಷ್ಣ ಭಟ್, ಶಾಂತಾಮಣಿ, ಶ್ರೀದೇವಿ, ಚಂದ್ರಾವತಿ, ರಿಶಾದ್ ಪಿ.ಎಂ.ಎ, ಶ್ರೀಧರ ಭಟ್ ಮೊದಲಾದವರು ಶ್ರೀಕೃಷ್ಣ ಭಟ್ ಅವರ ಸೇವಾವಧಿಯನ್ನು ಸ್ಮರಿಸಿ ಶುಭ ಹಾರೈಸಿದರು.
ಶ್ರೀಕೃಷ್ಣ ಭಟ್ ಮಾತನಾಡಿ ಸಂಸ್ಥೆ, ಸಮಾಜ, ಮಕ್ಕಳು ತೋರಿದ ಪ್ರೀತಿಗೆ ಸದಾ ಆಭಾರಿ ಎಂದರು. ಶಿಕ್ಷಕ ಮಹೇಶ್ ಪ್ರಾರ್ಥನೆಗೈದರು. ಶಾಲಾ ಮುಖ್ಯೋಪಾಧ್ಯಾಯರಾದ ರಾಜಗೋಪಾಲ ಕೆ. ಸ್ವಾಗತಿಸಿ, ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿ ಚಂದ್ರಹಾಸ ನಂಬಿಯಾರ್ ವಂದಿಸಿದರು. ಪ್ರಮೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಎ.ಎನ್., ಚಂದ್ರಪ್ರಭಾ, ಜಯಲತಾ, ಲಲಿತಾಂಬಾ ಸಹಕರಿಸಿದರು.