ಪುಲ್ವಾಮಾದಲ್ಲಿ ಮುಸ್ಲಿಮರಿಂದ ದೇವಾಲಯ ಪುನರುತ್ಥಾನ!
0
ಮಾರ್ಚ್ 06, 2019
ಪುಲ್ವಾಮಾ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕ ಕೃತ್ಯಗಳು ಮೇಲಿಂದ ಮೇಲೆ ನಡೆಯುತ್ತಿದೆ. ಕಳೆದ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಉಗ್ರರು ಕೃತ್ಯ ನಡೆಸಿದ ಬಳಿಕ ಅದು ಮತ್ತಷ್ಟು ಉಲ್ಭಣಗೊಂಡಿದ್ದು ಈ ಮಧ್ಯೆ ಮುಸ್ಲಿಂರು ಶಿವ ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದಾರೆ.
ಭಾರತೀಯ ಯೋಧರ ಮೇಲೆ ದಾಳಿ ನಡೆದಿದ್ದ ಜಾಗದಿಂದ ಕೇವಲ 12 ಕಿ.ಮೀ ದೂರದಲ್ಲಿರುವ ಬರೇಲಿಯಲ್ಲಿರುವ ಹಿಂದೂ ದೇವಸ್ಥಾನದ ಮರು ನವೀಕರಣಕ್ಕೆ ಮುಸ್ಲಿಂ ಕುಟುಂಬವೊಂದು ಮುಂದಾಗಿದೆ. ಕಾಶ್ಮೀರಿ ಪಂಡಿತ್ ಫ್ಯಾಮಿಲಿ ಜೊತೆ ಸೇರಿ 80 ವರ್ಷಗಳ ಹಳೆಯದಾದ ಶಿವನ ದೇವಸ್ಥಾನವನ್ನು ಇದೀಗ ಮರು ನವೀಕರಣ ಮಾಡಲಾಗಿದೆ.
1990ರಲ್ಲಿರಲ್ಲಿ ಈ ಸ್ಥಳದಲ್ಲಿ ಉಗ್ರರ ಉಪಟಳ ಹೆಚ್ಚಾದ ಕಾರಣ ಅನೇಕ ಹಿಂದೂ ಕುಟುಂಬಗಳು ಇಲ್ಲಿಂದ ಬೇರೆಡೆ ಸ್ಥಳಾಂತರಗೊಂಡಿದ್ದವು. ಆದರೆ ಇನ್ನು ಕೆಲ ಹಿಂದೂ ಕಾಶ್ಮೀರಿ ಪಂಡಿತರು ಇಲ್ಲಿ ವಾಸವಾಗಿದ್ದು ಇದೀಗ ಈ ದೇವಾಲಯ ಮರು ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಇಲ್ಲಿನ ಮುಸ್ಲಿಂರು ಮಸೀದಿಗಳಲ್ಲಿ ನಮಾಜ್ ಮಾಡುವಂತೆ ದೇವಾಲಯಕ್ಕೂ ತೆರಳಿ ಪೂಜೆ ಮಾಡಲು ಇಷ್ಟಪಡುತ್ತಾರೆ. ಈ ಹಿಂದೆ ಯಾವ ರೀತಿ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವೋ ಅದೇ ರೀತಿ ಮುಂದಿನ ದಿನಗಳಲ್ಲೂ ನಡೆಯಬೇಕು ಎಂಬ ಉದ್ದೇಶದಿಂದ ಈ ಶಿವನ ದೇವಾಲಯ ಮರು ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.