ವಿಶ್ವರಂಗಭೂಮಿ-ಸಿನಿಮಾಗಳಲ್ಲಿ ಕಾಸರಗೋಡಿನ ಛಾಪು ಮಹತ್ತರ-ಲಯನ್.ಕಿಶೋರ್ ಡಿ.ಶೆಟ್ಟಿ. ವಿಶ್ವ ರಂಗಭೀಮಿ ದಿನಾಚರಣೆ ಉದ್ಘಾಟಿಸಿ ಅಭಿಮತ
0
ಮಾರ್ಚ್ 29, 2019
ಕಾಸರಗೋಡು: ಗಡಿನಾಡಿನ ಕಲಾವಿದರು ವಿಶ್ವದ ವಿವಿಧೆಡೆಗಳ ರಂಗಭೂಮಿಯಲ್ಲಿ ಕಾರ್ಯವೆಸಗುತ್ತಿರುವುದು ಶ್ಲಾಘನೀಯ. ತಾನು ವಿಶ್ವದ ವಿವಿಧೆಡೆಗಳಲ್ಲಿ ಸಂಚರಿಸಿದಾಗ ವಿಶೇಷವಾಗಿ ಗುರುತಿಸಿದ ಅಂಶವೆಂದರೆ ಗಡಿನಾಡಿನ ಕಲಾವಿದರು ರಂಗಭೂಮಿಯ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡು ವಿಶಿಷ್ಟ ಕೊಡುಗೆ ನೀಡುತ್ತಿರುವುದಾಗಿದೆ ಎಂದು ಸಿನಿಮಾ ನಿರ್ಮಾಪಕ, ರಂಗ ಸಂಘಟಕ ಲಯನ್.ಕಿಶೋರ್ ಡಿ.ಶೆಟ್ಟಿ ಅವರು ತಿಳಿಸಿದರು.
ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಬುಧವಾರ ಸಂಜೆ ಕಾಸರಗೋಡು ಪಾರೆಕಟ್ಟೆಯ ರಂಗ ಕುಟೀರ ಆಯೋಜಿಸಿದ್ದ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡಿನಿಂದ ಪ್ರಾರಂಭಗೊಳ್ಳುವ ಸಿನಿಮಾ, ತಾನು ನಡೆಸುತ್ತಿರುವ ಎರಡು ನಾಟಕ ಸಂಸ್ಥೆಗಳಲ್ಲಿ ಕಾಸರಗೋಡು ಮೂಲದ ಕಲಾವಿದರೇ ಹೆಚ್ಚಿರುವುದು ಹೆಮ್ಮೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಕಾಸರಗೋಡಿನ ಕಲಾವಿದರನ್ನೇ ಸೇರಿಸಿ ತುಳು ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದೇನೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಹಾಗೂ ರಂಗ ಕುಟೀರದ ನಿರ್ದೇಶಕ ಎಂ. ಉಮೇಶ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಸರಗೋಡಿನ ನೂರಾರು ಕಲಾವಿದರು ರಂಗಭೂಮಿ ಹಾಗೂ ಸಿನಿ ಜಗತ್ತಿನಲ್ಲಿದ್ದಾರೆ. ತುಳು ಹಾಗೂ ಕನ್ನಡ ನಾಟಕಗಳನ್ನು ಕಾಸರಗೋಡಿನ ಕನ್ನಡಿಗರಿಗೆ ತಲಪಿಸುವ ಯತ್ನಗಳಾಗಬೇಕು ಎಂದು ತಿಳಿಸಿದರು. ಅಲ್ಲದೆ ತುಳು ಸಿನಿಮಾಗಳ ಛಾಯಾಗ್ರಹಣಕ್ಕೆ ಸೂಕ್ತವಾದ ಹಲವು ವ್ಯಾಪ್ತಿಗಳು ಕಾಸರಗೋಡಿನಲ್ಲಿದ್ದು, ಅಂತಹ ವೇದಿಕೆಯನ್ನು ಮುಂದಿನ ದಿನಗಳಲ್ಲಿ ಸಾಕ್ಷಾತ್ಕರಿಸಲು ರಂಗ ಕುಟೀರ ಪ್ರಯತ್ನಿಸಲಿದೆ ಎಂದು ತಿಳಿಸಿದರು.
ಹಿರಿಯ ರಂಗನಟ ಸುಬ್ಬಣ್ಣ ಶೆಟ್ಟಿ ರಂಗಭೂಮಿ ದಿನಾಚರಣೆಯ ಪ್ರಸ್ತುತ ವರ್ಷದ ಸಂದೇಶ ವಾಚಿಸಿದರು. ನ್ಯಾಯವಾದಿ ಜಯರಾಜ್, ಜಯಚಂದ್ರನ್, ಪುಷ್ಪರಾಜ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಟಿ.ವಿ.ಗಂಗಾಧರನ್, ಪುರುಷೋತ್ತಮ, ಭಾರತೀಬಾಬು, ಸನ್ನಿ ಅಗಸ್ಟಿನ್, ದಿವಾಕರ ಅಶೋಕನಗರ, ಜಾನ್ನವಿ, ದಯಾ ಪಿಲಿಕುಂಜೆ, ಮಧುಸೂದನ ಬಲ್ಲಾಳ್, ಬಾಲರಾಜ್, ಉದಯ ಸಾರಂಗ್, ಮೋಹಿನಿ, ಶಶಿಧರ ಎದುರ್ತೋಡು, ಜಯಂತಿ ಸುವರ್ಣ, ಚಂದ್ರಹಾಸ ಕೈಯ್ಯಾರು, ಸುರೇಶ್ ಬೇಕಲ್, ಸುಂದರ ಮವ್ವಾರು ಮೊದಲಾದವರು ಉಪಸ್ಥಿತರಿದ್ದರು. ರಂಗನಟ, ನಿರ್ದೇಶಕ ಕಿರಣ್ ಕಲಾಂಜಲಿ ಅವರು ವಿರಾಟ್ ಏಕಾಂಕ ನಾಟಕ ಪ್ರದರ್ಶಿಸಿದರು. ಮಕ್ಕಳಿಂದ ಪೈತೃಗಂ ಮಲೆಯಾಳ ನಾಟಕ ಪ್ರದರ್ಶನಗೊಂಡಿತು. ಅಶ್ವಿನಿ ಪಿ.ಯು.ಸ್ವಾಗತಿಸಿ, ನಶ್ಮಿತಾ ಕಮಲೇಶ್ ವಂದಿಸಿದರು.