ಹೀಗೂ ಒಂದು ಆಗ್ರಹ!= ಇಮ್ರಾನ್ ಗೆ ನೊಬೆಲ್ ಪ್ರಶಸ್ತಿ ಕೊಡಿ: ಪಾಕ್ ಒತ್ತಾಯ; ಸಿಕ್ಕರೂ ಚಹರೆ ಬದಲಾಗದು: ರಾಮ್ ಮಾಧವ್
0
ಮಾರ್ಚ್ 02, 2019
ನವದೆಹಲಿ: ಭಾರತ-ಪಾಕಿಸ್ತಾನದ ನಡುವೆ ಉಂಟಾಗಿದ್ದ ಪ್ರಕ್ಷುಬ್ಧ ಪರಿಸ್ಥಿತಿ ನಿರ್ವಹಣೆ ಮಾಡಿದ್ದಕ್ಕಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ಆಗ್ರಹಿಸಲಾಗಿದೆ.
ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ಸೆಕ್ರೆಟೇರಿಯೆಟ್ ನಲ್ಲಿ ಇಮ್ರಾನ್ ಖಾನ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ಒತ್ತಾಯಿಸಲಾಗಿದೆ. ನಿರ್ಣಯವನ್ನು ಮಂಡಿಸಿರುವ ಮಾಹಿತಿ ಸಚಿವ ಫವಾದ್ ಚೌಧರಿ, ಭಾರತದ ನಾಯಕತ್ವ ಯುದ್ಧ ಉನ್ಮಾದ ಹಾಗೂ ಆಕ್ರಮಣಶೀಲತೆಯ ವರ್ತನೆಯಿಂದಾಗಿ ಎರಡು ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು ಯುದ್ಧದ ಸನಿಹದಲ್ಲಿದ್ದವು ಎಂದು ಆರೋಪಿಸಿದ್ದಾರೆ.
ಭಾರತ-ಪಾಕಿಸ್ತಾನದ ನಡುವೆ ಉಂಟಾಗಿದ್ದ ಸ್ಥಿತಿಯನ್ನು ಇಮ್ರಾನ್ ಖಾನ್ ಅತ್ಯುತ್ತಮವಾನಿ ನಿರ್ವಹಿಸಿದರಷ್ಟೇ ಅಲ್ಲದೇ ಶಾಂತಿಯೆಡೆಗೆ ಕೊಂಡೊಯ್ದರು, ಆದ್ದರಿಂದ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಟ್ವಿಟರ್ ನಲ್ಲಿ #NobelPeacePrizeForImranKhan ಹ್ಯಾಷ್ ಟ್ಯಾಗ್ ಟಾಪ್ ಟ್ರೆಂಡ್ ಆಗಿತ್ತು.
2020 ನೇ ಸಾಲಿನಲ್ಲಿ ಇಮ್ರಾನ್ ಖಾನ್ ಗೆ ಶಾಂತಿ ಪ್ರಶಸ್ತಿ ನೀಡಬೇಕೆಂದು ನಾರ್ವೆಯ ನೊಬೆಲ್ ಸಮಿತಿ ನಾಮನಿರ್ದೇಶನ ಸಮಿತಿಗೂ ಆನ್ ಲೈನ್ ಅರ್ಜಿ ಸಲ್ಲಿಸಲಾಗಿದೆ.
ಇಮ್ರಾನ್ ಗೆ ನೊಬೆಲ್ ಸಿಕ್ಕರೂ ಪಾಕ್ ಚಹರೆ ಬದಲಾಗದು: ರಾಮ್ ಮಾಧವ್:
ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ಅವರ ಬಿಡುಗಡೆಗೆ ತೆಗೆದುಕೊಂಡ ಐತಿಹಾಸಿಕ ನಿರ್ಧಾರಕ್ಕಾಗಿ ಒಂದು ವೇಳೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ತೆಗೆದುಕೊಂಡರೂ ಅದರಿಂದ ಪಾಕ್ ಗೆ ಯಾವ ಪ್ರಯೋಜನವೂ ಅಗುವುದಿಲ್ಲ, ಚಹರೆಯೂ ಬದಲಾಗದು ಎಂದು ಬಿಜೆಪಿ ನಾಯಕ ರಾಮ್ ಮಾಧವ್ ಶನಿವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇಮ್ರಾನ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡಬೇಕು ಎಂಬ ಬೇಡಿಕೆ ಪಾಕಿಸ್ತಾನದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ ಒಂದು ವೇಳೆ ಅದು ಅವರಿಗೆ ದೊರೆಕಿದರೂ ಪಾಕಿಸ್ತಾನದಲ್ಲಿ ಹುಟ್ಟಿದ ಭಯೋತ್ಪಾದನೆಯನ್ನು, ಅದು ತನ್ನ ರಾಜ್ಯ ನೀತಿಯಂತೆ ಬಳಕೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ ಇದರಿಂದ ಪಾಕ್ ಗೆ ಯಾವುದೆ ಪ್ರಯೋಜನವಾಗದು, ಜಗತ್ತು ಪಾಕಿಸ್ತಾನವನ್ನು ನೋಡುವ ದೃಷ್ಟಿಕೋನವೂ ಬದಲಾಗದು ಎಂದು ಅವರು ಹೇಳಿದರು. ಇಂಡಿಯಾ ಟುಡೇ ಸಮಾವೇಶದಲ್ಲಿ ಮಾತನಾಡಿದ ಅವರು, ಇಮ್ರಾನ್ ಖಾನ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕು ಎಂದು ಪಿಟಿಐ ಪಕ್ಷದ ಕಾರ್ಯಕರ್ತರು ಮತ್ತು ಜನರಿಂದ ಒತ್ತಾಯ ಹೆಚ್ಚಾಗಿ ಕೇಳಿ ಬರುತ್ತಿದೆ ಅವರ ಪಕ್ಷದಲ್ಲೂ ಒತ್ತಡ ತೀವ್ರಗೊಂಡಿದೆ. ಅವರು ಅದನ್ನು ತೆಗೆದುಕೊಂಡರೂ ಇದು ನಿಜವಾಗಿಯೂ ಪಾಕಿಸ್ತಾನಕ್ಕೆ ಸಹಾಯ ಮಾಡುವುದೇ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.