ಈಗಿರುವ ವಿವಿಪ್ಯಾಟ್ ಎಣಿಕೆಯೇ ಅತ್ಯಂತ ಸೂಕ್ತ: ಸುಪ್ರೀಂ ಕೋರ್ಟ್ ಗೆ ಚುನಾವಣಾ ಆಯೋಗ
0
ಮಾರ್ಚ್ 30, 2019
ನವದೆಹಲಿ: ಈಗಿರುವ ವಿವಿಪ್ಯಾಟ್ ಎಣಿಕೆ ವಿಧಾನವೇ ಅತ್ಯಂತ ಸೂಕ್ತವಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಚುನಾವಣಾ ಆಯೋಗ ಹೇಳಿದೆ.
ಪ್ರಸ್ತುತ ಪ್ರತಿ ವಿಧಾನಸಭಾ ಕ್ಷೇತ್ರಗಳ ಒಂದು ಮತಗಟ್ಟೆಯಲ್ಲಿ ವಿವಿಪ್ಯಾಟ್ ಸ್ಯಾಂಪಲ್ ಸಮೀಕ್ಷೆ ಮಾಡಲಾಗುತ್ತಿದೆ. ಈ ವಿಧಾನವೇ ಅತ್ಯಂತ ಸೂಕ್ತವಾದದ್ದು ಎಂದು ಚುನಾವಣಾ ಆಯೋಗದ ಸಮಿತಿ ಸುಪ್ರೀಂ ಕೋರ್ಟ್ ಗೆ ನಿನ್ನೆ ಹೇಳಿದೆ.
ಲೋಕಸಭಾ ಚುನಾವಣೆ ವೇಳೆ ಪ್ರತಿ ವಿಧನಸಭಾ ಕ್ಷೇತ್ರಗಳಲ್ಲೂ ಕನಿಷ್ಟ ಶೇ.50 ರಷ್ಟು ವಿವಿಪ್ಯಾಟ್ ಚೀಟಿಗಳನ್ನು ಪರಿಶೀಲಿಸಲು ಆದೇಶ ನೀಡಬೇಕೆಂದು ಪ್ರತಿಪಕ್ಷಗಳ ನಾಯಕರಾದ ಚಂದ್ರಬಾಬು ನಾಯ್ಡು ಸೇರಿದಂತೆ ಹಲವರು ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ವಿವಿಪ್ಯಾಟ್ ಸಮೀಕ್ಷೆಯನ್ನು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಏರಿಕೆ ಮಾಡಲು ಸಾಧ್ಯವೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಮಾ.25 ರಂದು ಸುಪ್ರೀಂ ಕೋರ್ಟ್ ಆಯೋಗವನ್ನು ಕೇಳಿತ್ತು.
ವಿವಿಪ್ಯಾಟ್ ಕುರಿತಾದ ಆಕ್ಷೇಪಗಳನ್ನು ಈಗಾಗಲೇ ಪರಿಗಣಿಸಲಾಗಿದೆ. ಪ್ರತಿಪಕ್ಷಗಳ ಬೇಡಿಕೆಯನ್ನು ಪರಿಗಣಿಸುವುದಕ್ಕೆ ಯಾವುದೇ ಆಧಾರವಿಲ್ಲ ಹಾಗಾಗೀ ಈಗಿರುವ ವ್ಯವಸ್ಥೆಯೇ ಸೂಕ್ತವಾಗಿದೆ ಎಂದು ಚುನಾವಣಾ ಆಯೋಗ ತಾನು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿದೆ.