ತುಳು ಭವನದ ಸ್ಥಳದಲ್ಲಿ ಸಮಾಜ ಘಾತಕರ ಹಾವಳಿ
0
ಮಾರ್ಚ್ 05, 2019
ಮಂಜೇಶ್ವರ: ಮಂಜೇಶ್ವರ ಹೊಸಂಗಡಿ ಸಮೀಪದ ದುರ್ಗಿಪಳ್ಳದಲ್ಲಿ ತುಳು ಅಕಾಡೆಮಿಯ ನೂತನ ತುಳು ಭವನ ನಿರ್ಮಾಣಕ್ಕೆ ಕಳೆದ ಬುಧವಾರ ರಾಜ್ಯ ವಿಧಾನ ಸಭಾ ನಾಯಕ ಶ್ರೀರಾಮಕೃಷ್ಣನ್ ಶಿಲಾನ್ಯಾಸ ನೆರವೇರಿಸಿದ್ದರು. ತುಳು ಅಕಾಡೆಮಿಯ ತುಳು ಭವನಕ್ಕಾಗಿ ಕಡಂಬಾರ್ ಗ್ರಾಮದ ದುರ್ಗಿಪಳ್ಳದಲ್ಲಿ ಒಂದು ಎಕರೆ ಸ್ಥಳವನ್ನು ಸರಕಾರ ಮಂಜೂರು ಮಾಡಿತ್ತು. ಆದರೆ ಭಾನುವಾರ ರಾತ್ರಿ ತುಳು ಭವನ ನಿರ್ಮಾಣ ಪರಿಸರದಲ್ಲಿ ಸ್ಥಾಪಿಸಲಾಗಿದ್ದ ತುಳು ಭವನದ ನೀಲಿನಕಾಶೆಯ ಬ್ಯಾನರ್ ನ್ನು ಸಮಾಜ ದ್ರೋಹಿಗಳು ಹರಿದು ಹಾಕಿದ ಸ್ಥಿತಿಯಲ್ಲಿ ಕಂಡುಬಂದಿದೆ. ಬಟ್ಟೆಯಲ್ಲಿ ತಯಾರಿಸಿದ ಬ್ಯಾನರ್ ಕೂಡಾ ಹರಿದು ಹಾಕಲಾಗಿದೆ. ಸ್ಥಳದಲ್ಲಿ ಕೃತ್ಯಕ್ಕೆ ಬಳಸಿದ ಒಂದು ಚೂರಿ ಪತ್ತೆಯಾಗಿದ್ದು ಅಪರಾಧಿಗಳನ್ನು ಪತ್ತೆ ಹಚ್ಚಲು ಸುಲಭ ದಾರಿ ಒದಗಿಸಿದೆ. ಇದಲ್ಲದೇ ಸ್ಥಳದಲ್ಲಿ ಕೆಲವು ಕಿಡಿಕೇಡಿಗಳು ಮಾಲಿನ್ಯಗಳನ್ನು ಕೂಡಾ ನಿಕ್ಷೇಪಿಸುತ್ತಿದ್ದಾರೆ. ಸಮಾಜ ದ್ರೋಹಿಗಳನ್ನು ಮಟ್ಟ ಹಾಕಲು ಪೋಲೀಸರು ತಯಾರಾಗಬೇಕು ಎಂದು ಅಕಾಡೆಮಿ ಕಾರ್ಯದರ್ಶಿಗಳು ಮಂಜೇಶ್ವರದ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.