ಗಡಿ ರಕ್ಷಣೆಗೆ ಮುಂದಾಗಿದ್ದ ಅಭಿನಂದನ್ ಆಕ್ರಮಣಕಾರಿಯಾಗಿರಲಿಲ್ಲ: ಪಾಕ್ ಗೆ ಭಾರತ ತಿರುಗೇಟು
0
ಮಾರ್ಚ್ 01, 2019
ನವದೆಹಲಿ: ಸೌಹಾರ್ಧತೆಯ ಸೂಚಕವಾಗಿ ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ಬಿಡುಗಡೆ ಮಾಡುತ್ತಿರುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಣೆ ಮಾಡಿದ ಬೆನ್ನಲ್ಲೇ ಇದಕ್ಕೆ ತಿರುಗೇಟು ನೀಡಿರುವ ಭಾರತ, ಅಭಿನಂದನ್ ರನ್ನು ವಶದಲ್ಲಿಟ್ಟುಕೊಳ್ಳಲು ಪಾಕಿಸ್ತಾನಕ್ಕೆ ಕಾರಣಗಳೇ ಇರಲಿಲ್ಲ ಎಂದು ಹೇಳಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ರಕ್ಷಣಾ ಸಚಿವಾಲಯ ಪಾಕಿಸ್ತಾನಕ್ಕೆ ಪೈಲಟ್ ಅಭಿನಂದನ್ ರನ್ನು ವಶದಲ್ಲಿಟ್ಟುಕೊಳ್ಳಲು ಕಾರಣಗಳೇ ಇರಲಿಲ್ಲ. ಪೈಲಟ್ ಅಭಿನಂದನ್ ಕೇವಲ ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ. ಭಾರತೀಯ ವಾಯುಗಡೆ ಉಲ್ಲಂಘನೆ ಮಾಡಿದ್ದ ಪಾಕಿಸ್ತಾನದ ಎಫ್-1ಯುದ್ಧ ವಿಮಾನಗಳನ್ನು ಅಭಿನಂದನ್ ಹಿಮ್ಮೆಟ್ಟಿಸಿದ್ದಾರೆಯೇ ಹೊರತು ಅವರು ಪಾಕ್ ವಾಯುಗಡೆ ಉಲ್ಲಂಘನೆ ಮಾಡಿ ದಾಳಿ ಮಾಡಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆ ಅಭಿನಂದನ್ ರನ್ನು ವಶಗಟ್ಟುಕೊಳ್ಳಲು ಕಾರಣಗಳೇ ಇರಲಿಲ್ಲ ಎಂದು ಭಾರತ ಹೇಳಿದೆ.
ಗುರುವಾರ ಪಾಕಿಸ್ತಾನದ ಜಂಟಿ ಸಂಸತ್ ಅಧಿವೇಶನದಲ್ಲಿ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು, ಸೌಹಾರ್ಧತೆ ಮತ್ತು ಶಾಂತಿಯ ಸೂಚಕವಾಗಿ ನಮ್ಮ ವಶದಲ್ಲಿರುವ ಭಾರತೀಯ ವಾಯುಸೇನೆ ಪೈಲಟ್ ಅಭಿನಂದನ್ ರನ್ನು ನಾಳೆ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದರು. ಅಂತೆಯೇ ಅಭಿನಂದನ್ ರ ಬಿಡುಗಡೆ ನಮ್ಮ ದೌರ್ಬಲ್ಯ ಎಂದು ಭಾರತ ಭಾವಿಸಬಾರದು. ಇದು ಕೇವಲ ಶಾಂತಿಯ ದ್ಯೋತಕವಾಗಿ ಪೈಲಟ್ ರನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಇಮ್ರಾನ್ ಖಾನ್ ಹೇಳಿದ್ದರು.
ಜೊತೆಗೆ ವಿಶ್ವಸಮುದಾಯಕ್ಕೂ ಮನವಿ ಮಾಡಿರುವ ಇಮ್ರಾನ್ ಖಾನ್ ಇಂಡೋ-ಪಾಕ್ ನಡುವೆ ಭುಗಿಲೆದ್ದಿರುವ ಸಂಘರ್ಷ ಸ್ಥಗಿತಕ್ಕೆ ಮುಂದಾಗಬೇಕು ಎಂದೂ ಮನವಿ ಮಾಡಿದ್ದರು.